ಹಾಸನ: ಜಿಲ್ಲಾಡಳಿತದಲ್ಲಿ ಕ್ರಷರ್ ಹಾಗೂ ಭೂ ಪರಿವರ್ತನೆ ಕಡತಗಳ ವಿಲೇವಾರಿಗೆ ಕೋಟ್ಯಂತರ ರೂಪಾಯಿ ಲಂಚದ ವ್ಯವಹಾರ ನಡೆದಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಹೆಚ್ಡಿಕೆ ಬಿಡುಗಡೆ ಮಾಡಿರುವ ವಾಟ್ಸಾಪ್ ಚಾಟ್ ದಾಖಲೆಗಳ ನೈಜತೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ತಾವು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ತಮ್ಮ ಆಪ್ತ ಸಹಾಯಕ ಶಶಿಕಿರಣ್ ಎಂಬುವವರ ಮೂಲಕ 60 ಲಕ್ಷ ಲಂಚದ ಚೌಕಾಸಿ ನಡೆದಿದೆ ಹಾಗೂ ತಮ್ಮ ನಿವಾಸದ ಗೇಟ್ ಬಳಿಯ ಪೊಲೀಸ್ ಚೌಕಿಯಲ್ಲೇ ಹಣದ ವಿನಿಮಯವಾಗಿದೆ ಎಂಬ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದ್ದು, ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿರುವ ವಾಟ್ಸಾಪ್ ಚಾಟ್ಗಳು ಅಸಲಿಯೇ ಅಥವಾ ನಕಲಿಯೇ (Fake Chat) ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರಿಂದ ಸಮಗ್ರ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿದ್ಧ
“ನನ್ನ ಕಚೇರಿಯಲ್ಲಿ ಅಥವಾ ಆಪ್ತ ಸಿಬ್ಬಂದಿ ವರ್ಗದಲ್ಲಿ ಯಾರಾದರೂ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವುದು ತನಿಖೆಯಿಂದ ಸಾಬೀತಾದರೆ, ಅವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ನೇರವಾಗಿ ಇಡೀ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ತನಿಖೆಯ ವರದಿ ಬಂದ ಬಳಿಕ ಎಲ್ಲವೂ ಜಗಜ್ಜಾಹೀರಾಗಲಿದೆ” ಎಂದು ಡಿಸಿ ಲತಾಕುಮಾರಿ ಹೇಳಿದ್ದಾರೆ. ಈ ಅಧಿಕಾರಿಯ ಹೇಳಿಕೆಯು ಹಾಸನ ಜಿಲ್ಲೆಯ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಮತ್ತೊಂದು ಸುತ್ತಿನ ಸಂಚಲನಕ್ಕೆ ಕಾರಣವಾಗಿದೆ.

