Mon. Nov 9th, 2026

ದೀಪಾವಳಿ ಹಬ್ಬದ ಹಿನ್ನೆಲೆ: ಮೈಸೂರಿನ ಪ್ರಮುಖ ಪ್ರದೇಶಗಳು ‘ನಿಶ್ಯಬ್ದ ವಲಯ’ ಎಂದು ಘೋಷಣೆ; ಪಟಾಕಿ ಸಿಡಿಸುವುದು ಕಡ್ಡಾಯ ನಿಷೇಧ

Share this with Friends

ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ತೀವ್ರ ಶಬ್ದ ಮತ್ತು ವಾಯು ಮಾಲಿನ್ಯದಿಂದ ಹಿರಿಯ ನಾಗರಿಕರು, ರೋಗಿಗಳು ಹಾಗೂ ಪ್ರಾಣಿ-ಪಕ್ಷಿಗಳನ್ನು ರಕ್ಷಿಸುವ ಸಲುವಾಗಿ ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವು ಪ್ರಮುಖ ಸ್ಥಳಗಳನ್ನು ‘ನಿಶ್ಯಬ್ದ ವಲಯ’ (Silence Zone) ಎಂದು ಘೋಷಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಐ.ಪಿ.ಎಸ್., ಅವರು ‘ದಿ ನಾಯ್ಸ್ ಪೊಲ್ಯೂಷನ್ (ರೆಗ್ಯುಲೇಷನ್ ಅಂಡ್ ಕಂಟ್ರೋಲ್) ರೂಲ್ಸ್, 2000’ ನಿಯಮದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಜಾರಿಗೊಳಿಸಿದ್ದಾರೆ. ದಿನಾಂಕ 08/11/2026 ರಿಂದ 10/11/2026 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ನಿಶ್ಯಬ್ದ ವಲಯಗಳಲ್ಲಿ ಯಾವುದೇ ರೀತಿಯ ಪಟಾಕಿ ಸಿಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ನಿಶ್ಯಬ್ದ ವಲಯಗಳೆಂದು ಘೋಷಿತವಾಗಿರುವ ಪ್ರಮುಖ ಪ್ರದೇಶಗಳು:

ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು ಜೂ)

ಕುಕ್ಕರಹಳ್ಳಿ ಕೆರೆ ಪ್ರದೇಶ

ಕಾರಂಜಿ ಕೆರೆ ಪ್ರದೇಶ

ಲಿಂಗಾಂಬುದಿ ಕೆರೆ ಪ್ರದೇಶ

ಸಾರ್ವಜನಿಕ ಉದ್ಯಾನವನಗಳು

ನಗರದ ಎಲ್ಲಾ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ 100 ಮೀಟರ್ ಸುತ್ತಳತೆಯ ಪ್ರದೇಶ

ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯಗಳು ಮತ್ತು ಧಾರ್ಮಿಕ ಸ್ಥಳಗಳ 100 ಮೀಟರ್ ಸುತ್ತಳತೆಯ ಪ್ರದೇಶ

ಹಿನ್ನೆಲೆ ಮತ್ತು ಕಟ್ಟುನಿಟ್ಟಿನ ಕ್ರಮ:

ಸರ್ವೋಚ್ಚ ನ್ಯಾಯಾಲಯ ಹಾಗೂ ಪ್ರಧಾನ ಹಸಿರು ನ್ಯಾಯಪೀಠ (NGT) ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಯಂತ್ರಣ ಕುರಿತು ನೀಡಿರುವ ನಿರ್ದೇಶನಗಳನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪಟಾಕಿಗಳಿಂದ ಹೊರಹೊಮ್ಮುವ ರಾಸಾಯನಿಕಗಳು ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಸೋಂಕಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಅಸ್ತಮಾ ಪೀಡಿತರು ಹಾಗೂ ಅಸಹಾಯಕರ ಹಿತದೃಷ್ಟಿಯಿಂದ ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಲಾಗಿದೆ.

ಈ ಆದೇಶವನ್ನು ಉಲ್ಲಂಘಿಸಿ ನಿಶ್ಯಬ್ದ ವಲಯಗಳಲ್ಲಿ ಪಟಾಕಿ ಸಿಡಿಸುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪಿ.ಐ, ಎ.ಸಿ.ಪಿ, ಡಿ.ಸಿ.ಪಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.

 


Share this with Friends

Related Post