ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ ನಿಯಮಾವಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತಮ್ಮ ಇಲಾಖೆಯ ವರದಿಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.
ವಿಕಾಸಸೌಧದಲ್ಲಿ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ರಾಜ್ಯಾದ್ಯಂತ ನಿಯಮಾವಳಿಗಳ ಪ್ರಕಾರವೇ (Rules) 63 ಪೆಟ್ರೋಲ್ ಮಾದರಿಗಳನ್ನು (Samples) ಸಂಗ್ರಹಿಸಿ ತಪಾಸಣೆ ನಡೆಸಿದ್ದೇವೆ. ನಮ್ಮ ವರದಿಯಲ್ಲಿ ಯಾವುದೇ ಲೋಪವಿಲ್ಲ, ನಾವು ನಮ್ಮ ವರದಿಗೇ ಗಟ್ಟಿಯಾಗಿ ಬದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ವರದಿಯನ್ನು ಕೇಂದ್ರ ತೈಲ ಸಚಿವಾಲಯ ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳು (IOCL, HPCL, BPCL) ತಳ್ಳಿಹಾಕಿದ್ದವು. ತೈಲ ಕಂಪನಿಗಳ ಈ ತಾಂತ್ರಿಕ ವಾದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವರು, ಕಂಪನಿಗಳು ಕೇವಲ ತಾಂತ್ರಿಕ ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿವೆಯೇ ಹೊರತು ನೇರವಾದ ಉತ್ತರ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಿಯಮಬದ್ಧ ಸ್ಯಾಂಪಲ್ ಸಂಗ್ರಹ: ರಾಜ್ಯದ 7 ಜಿಲ್ಲೆಗಳ ವಿವಿಧ ಬಂಕ್ಗಳಿಂದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಿ, ಎಲ್ಲರ ಸಮ್ಮುಖದಲ್ಲೇ ಸಹಿ ಪಡೆದು 63 ಸ್ಯಾಂಪಲ್ಗಳನ್ನು ಸಂಗ್ರಹಿಸಿ NABL ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದರು.
ವರದಿಯ ಸತ್ಯಾಸತ್ಯತೆ: ತಪಾಸಣೆಗೆ ಒಳಪಡಿಸಿದ ಸ್ಯಾಂಪಲ್ಗಳಲ್ಲಿ ಶೇ. 20ರಷ್ಟು ಇರಬೇಕಿದ್ದ ಎಥೆನಾಲ್ ಅಂಶವು ಐಒಸಿಎಲ್ (IOCL) ನಲ್ಲಿ ಗರಿಷ್ಠ ಶೇ. 31.2 ಹಾಗೂ ಹೆಚ್ಪಿಸಿಎಲ್ (HPCL) ನಲ್ಲಿ ಶೇ. 30.5 ರಷ್ಟು ಪತ್ತೆಯಾಗಿದೆ. ಅಂದರೆ ಪ್ರತಿ 5 ಸ್ಯಾಂಪಲ್ಗಳಲ್ಲಿ 4 ಸ್ಯಾಂಪಲ್ಗಳು ವಿಫಲವಾಗಿವೆ ಎಂದರು
ಗ್ರಾಹಕರಿಗೆ ವಂಚನೆ: ದೇಶದಲ್ಲಿ ಶೇ. 99 ರಷ್ಟು ವಾಹನಗಳು E20 ಕ್ಕಿಂತ ಹೆಚ್ಚಿನ ಇಂಧನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಮಿತಿಮೀರಿದ ಎಥೆನಾಲ್ನಿಂದ ವಾಹನಗಳ ಇಂಜಿನ್, ರಬ್ಬರ್ ಪಾರ್ಟ್ಸ್ ಹಾಳಾಗುತ್ತಿದ್ದು, ಮೈಲೇಜ್ ಕಮ್ಮಿಯಾಗಿ ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವಾಗುತ್ತಿದೆ ಎಂದರು.
ಕೇಂದ್ರಕ್ಕೆ ಸಚಿವರ ಸವಾಲು: ಚುನಾಯಿತ ರಾಜ್ಯ ಸರ್ಕಾರವೊಂದು ಅಧಿಕೃತವಾಗಿ ಪ್ರಶ್ನೆ ಎತ್ತಿದಾಗ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳು ಪಾರದರ್ಶಕವಾಗಿ ಉತ್ತರ ನೀಡಬೇಕು. ಇದರಲ್ಲಿ ಯಾವುದೇ ರಾಜಕೀಯ ಸ್ವಾರ್ಥವಿಲ್ಲ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ತನಿಖೆ ಮುಂದುವರಿಯಲಿದೆ ಎಂದರು.

