ದಾವಣಗೆರೆ:ಭಾರತೀಯ ರಾಜಕೀಯ ಇತಿಹಾಸದಲ್ಲಿ ದೃಢ ನಾಯಕತ್ವದ ಮೂಲಕ ವಿಶಿಷ್ಟ ಛಾಪು ಮೂಡಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಪಯಣವನ್ನು ಅನಾವರಣಗೊಳಿಸುವ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕವನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸ್ವೀಕರಿಸಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸಂಸದರು, ಸೋನಿಯಾ ಗಾಂಧಿ ಅವರ ಬದುಕು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಇದು ಅಪಾರ ಪ್ರೀತಿ, ತ್ಯಾಗ, ಸಹನೆ, ಅಪ್ರತಿಮ ಧೈರ್ಯ ಹಾಗೂ ಜನಸೇವೆಯ ಬದ್ಧತೆಯನ್ನು ಒಳಗೊಂಡಿರುವ ಒಂದು ಅದ್ಭುತ ಸ್ಫೂರ್ತಿಯ ಪಯಣವಾಗಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾರ್ವಜನಿಕ ಜೀವನಕ್ಕೆ ಅತ್ಯುತ್ತಮ ಮಾದರಿ:
“ದೇಶದ ರಾಜಕೀಯದಲ್ಲಿ ಕಠಿಣ ಸವಾಲುಗಳು ಎದುರಾದ ಸಂದರ್ಭದಲ್ಲಿಯೂ ಸೋನಿಯಾ ಗಾಂಧಿ ಅವರು ಪ್ರದರ್ಶಿಸಿದ ಅಚಲ ದೃಢನಿಶ್ಚಯ, ದೂರದೃಷ್ಟಿತ್ವ ಮತ್ತು ಜನಪರವಾದ ಕಾಳಜಿಯು ಪ್ರಸ್ತುತ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ನಾಯಕರಿಗೂ ಅತ್ಯುತ್ತಮ ಮಾದರಿಯಾಗಿದೆ. ವಿಶೇಷವಾಗಿ ಒಬ್ಬ ಮಹಿಳೆಯಾಗಿ ರಾಜಕೀಯ ರಂಗದಲ್ಲಿ ಹತ್ತಾರು ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಿ, ದೇಶಕ್ಕೆ ಪ್ರಭಾವಶಾಲಿ ನಾಯಕತ್ವವನ್ನು ನೀಡಿದ ಅವರ ಬದುಕು, ನನ್ನಂತಹ ಮಹಿಳಾ ಜನಪ್ರತಿನಿಧಿಗಳಿಗೆ ಸದಾ ಕಾಲ ಸ್ಫೂರ್ತಿಯ ಮೂಲವಾಗಿದೆ” ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.
ಬದುಕಿನ ಹತ್ತು ಹಲವು ಅನುಭವಗಳು, ಅಗಲಿಕೆಯ ನೋವು, ಪ್ರೀತಿ ಮತ್ತು ಕಠಿಣ ಸಂದರ್ಭಗಳಲ್ಲಿ ತನ್ನತನದ ಹುಡುಕಾಟದ ರೋಚಕ ವಿವರಗಳನ್ನು ಒಳಗೊಂಡಿರುವ ಈ ಮಹತ್ವದ ಕೃತಿಯನ್ನು ಓದಲು ತಾವು ಅತ್ಯಂತ ಉತ್ಸುಕರಾಗಿರುವುದಾಗಿ ಸಂಸದರು ತಿಳಿಸಿದ್ದಾರೆ.

