Wed. Nov 11th, 2026

ಸಮರೋಪಾದಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಬೇಕು: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಕಟ್ಟುನಿಟ್ಟಿನ ಸೂಚನೆ

Share this with Friends

ಬೆಂಗಳೂರು: ರಾಜಧಾನಿ ಬೆಂಗಳೂರಿನಾದ್ಯಂತ ರಸ್ತೆ ಗುಂಡಿಗಳನ್ನು ಗುರುತಿಸಿ ತಕ್ಷಣವೇ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ನಗರದ ಎಲ್ಲಾ ಐದು ನಗರ ಪಾಲಿಕೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ವರ್ಚುವಲ್ ಮೂಲಕ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ಮತ್ತು ಉಪ-ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ವಿಶೇಷವಾಗಿ, ಪ್ರಸ್ತುತ ನಡೆಯುತ್ತಿರುವ ಹಾಗೂ ಮುಂಬರುವ ವೈಟ್-ಟಾಪಿಂಗ್ (White-topping) ಯೋಜನೆಯ ರಸ್ತೆ ಮಾರ್ಗಗಳು ಗುಂಡಿ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಗುತ್ತಿಗೆದಾರರ ಹೊಣೆಗಾರಿಕೆ ಮತ್ತು ದಂಡದ ಎಚ್ಚರಿಕೆ:

ದೋಷ ಮುಕ್ತ ಅವಧಿಯಲ್ಲಿರುವ (Defect Liability Period – DLP) ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡರೆ, ಆಯಾ ಗುತ್ತಿಗೆದಾರರೇ ಅವುಗಳನ್ನು ದುರಸ್ತಿಪಡಿಸಬೇಕು. ಉಳಿದ ರಸ್ತೆಗಳನ್ನು ಸಂಬಂಧಪಟ್ಟ ನಗರ ಪಾಲಿಕೆಗಳೇ ತಕ್ಷಣ ದುರಸ್ತಿಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಆದೇಶಿಸಿದರು. ಅಲ್ಲದೆ, ಪೂರ್ವಾನುಮತಿ ಪಡೆಯದೆ ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳನ್ನು ಅಗೆಯುವ ಬೆಸ್ಕಾಂ, ಜಲಮಂಡಳಿ (BWSSB) ಸೇರಿದಂತೆ ಇತರೆ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅನಧಿಕೃತ ರಸ್ತೆ ಅಗೆತವನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ತಾಕೀತು ಮಾಡಿದರು.

ಮೇಲ್ವಿಚಾರಣೆ ಮತ್ತು ಇತರೆ ಸೂಚನೆಗಳು:

ಹಿರಿಯ ಅಧಿಕಾರಿಗಳು ಖುದ್ದಾಗಿ ರಸ್ತೆಗಳನ್ನು ಪರಿಶೀಲಿಸಿ, ನಿಗದಿತ ಸಮಯದೊಳಗೆ ಗುಂಡಿಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ನಿಗದಿತ ತಂತ್ರಾಂಶದಲ್ಲಿ (Software) ವಿವರಗಳನ್ನು ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಿದರು. ಇದೇ ವೇಳೆ, ಹೊರವರ್ತುಲ ರಸ್ತೆಯ (ORR) ಇಮ್ಮಡಿಹಳ್ಳಿ ರಸ್ತೆಯಲ್ಲಿರುವ ಜಲಮಂಡಳಿ ಪೈಪ್‌ಲೈನ್ ನೀರಿನ ಸೋರಿಕೆಯನ್ನು ತಕ್ಷಣ ಸರಿಪಡಿಸಲು ಹಾಗೂ ಅತ್ತಿಗುಪ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಸದ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 


Share this with Friends

Related Post