ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ 2027ರಲ್ಲಿ ಮೂರು ದಿನಗಳ ಕಾಲ ‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಲಾಗುವುದು. ಈ ಕುರಿತು ಮುಂಬರುವ ರಾಜ್ಯ ಬಜೆಟ್‌ನಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ 4)’ ಗದ್ಯ ಮಹಾಕಾವ್ಯವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆಗೆ ಬದ್ಧ:
ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಹಿಂದೆ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಅಗತ್ಯ ಕಾನೂನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಾಹಿತ್ಯದ ಪ್ರಭಾವ ಶಾಶ್ವತ:
ಅಧಿಕಾರದ ಅವಧಿ ಸೀಮಿತವಾಗಿರುತ್ತದೆ, ಆದರೆ ಸಾಹಿತ್ಯ ಮತ್ತು ಚಿಂತನೆಗಳ ಪ್ರಭಾವ ಶಾಶ್ವತವಾಗಿರುತ್ತದೆ. ರಾಜಕಾರಣಿಗಳ ಹೆಸರುಗಳು ಕಾಲಕ್ರಮೇಣ ಮರೆಯಾಗಬಹುದು, ಆದರೆ ಸಾಹಿತಿಗಳ ಕೃತಿಗಳು ಸಮಾಜವನ್ನು ಸದಾ ಮುನ್ನಡೆಸುತ್ತವೆ. ಕತ್ತಿಗಿಂತ ಲೇಖನಿ ಹರಿತ ಎಂಬಂತೆ ಸಾಹಿತ್ಯಕ್ಕೆ ಜನರ ಆಲೋಚನೆಗಳನ್ನು ಬದಲಿಸುವ ಶಕ್ತಿಯಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಮೊಯಿಲಿ ಅವರಿಗೆ ಜ್ಞಾನಪೀಠ ಲಭಿಸಲಿ:
ವೀರಪ್ಪ ಮೊಯಿಲಿ ಅವರು ಸಿಇಟಿ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಬಾಗಿಲು ತೆರೆದರು. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೂ ಅವರೇ ಪ್ರೇರಣೆ. 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸರಸ್ವತಿ ಸಮ್ಮಾನ್ ಪುರಸ್ಕೃತರಾಗಿರುವ ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಲಭಿಸಲಿ ಎಂದು ಆಶಿಸಿದ ಸಿಎಂ, 1985ರಲ್ಲಿ ತಮಗೆ ಹಾಗೂ ಹಲವು ಯುವ ನಾಯಕರಿಗೆ ಚುನಾವಣಾ ಟಿಕೆಟ್ ಕೊಡಿಸುವಲ್ಲಿ ಮೊಯಿಲಿ ವಹಿಸಿದ್ದ ಪಾತ್ರವನ್ನು ಸ್ಮರಿಸಿದರು.

