Wed. Nov 11th, 2026

ನ.13ರಂದು ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಪ್ರಧಾನಿ ಮೋದಿ: ನ.14ರಿಂದ ಸಾರ್ವಜನಿಕ ಸಂಚಾರ ಆರಂಭ

Share this with Friends

ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ‘ಪಿಂಕ್ ಲೈನ್’ (Pink Line) ಮಾರ್ಗದ ಮೊದಲ ಹಂತವಾದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ನವೆಂಬರ್ 13ರಂದು ಉದ್ಘಾಟಿಸಲಿದ್ದಾರೆ. ಇದರ ಮರುದಿನ ನವೆಂಬರ್ 14ರಿಂದ ಸಾರ್ವಜನಿಕರ ಸಂಚಾರಕ್ಕೆ ಈ ಮಾರ್ಗ ಮುಕ್ತವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಸಚಿವರು, ಈ ಮಾರ್ಗ ಆರಂಭವಾಗುವುದರೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದ್ದು, ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.

ಪ್ರಧಾನಿ ಕಾರ್ಯಕ್ರಮದ ವಿವರ:

ನವೆಂಬರ್ 13ರಂದು ಮಧ್ಯಾಹ್ನ 12.30ಕ್ಕೆ ಡೇರಿ ವೃತ್ತದ ಅಗ್ನಿಶಾಮಕ ಠಾಣೆ ಬಳಿ ಆಗಮಿಸಲಿರುವ ಪ್ರಧಾನಿ ಮೋದಿ, ಅಲ್ಲಿಂದ ಸಮೀಪದ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ತೆರಳಿ ಪಿಂಕ್ ಲೈನ್ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ತಾವರೆಕೆರೆಯಿಂದ ಐಐಎಂಬಿ (IIMB) ಬಿಲ್ಲೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಐಐಎಂಬಿ ಸಭಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.

ಸಂಚಾರ ವ್ಯವಸ್ಥೆ ಮತ್ತು ಮುಂದಿನ ಯೋಜನೆಗಳು:

ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ ಐದು ರೈಲುಗಳನ್ನು (ನಾಲ್ಕು ಸಂಚಾರಕ್ಕೆ, ಒಂದು ಕಾಯ್ದಿರಿಸಿದ) ನಿಯೋಜಿಸಲಾಗುತ್ತಿದ್ದು, ದಟ್ಟಣೆ ಅವಧಿಯಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ರೈಲು ಲಭ್ಯವಿರಲಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ (Yellow Line) ಇಂಟರ್‌ಚೇಂಜ್ ಸೌಲಭ್ಯ ಇರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಡೇರಿ ವೃತ್ತದಿಂದ ನಾಗವಾರದವರೆಗಿನ 13.76 ಕಿ.ಮೀ. ಸುರಂಗ ಮಾರ್ಗವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಕೇಂದ್ರದ ಅನುದಾನ ಹೆಚ್ಚಿಸಲು ಪ್ರಧಾನಿಗೆ ಮನವಿ:

ಬೆಂಗಳೂರು ಮೆಟ್ರೋ ಯೋಜನೆಗಳಿಗೆ ಇದುವರೆಗೆ ಒಟ್ಟು 77,891 ಕೋಟಿ ವೆಚ್ಚವಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರ 65,291 ಕೋಟಿ (ಶೇ.84) ಭರಿಸಿದ್ದರೆ, ಕೇಂದ್ರ ಸರ್ಕಾರದ ಪಾಲು ಕೇವಲ 12,600 ಕೋಟಿ (ಶೇ.16) ಮಾತ್ರವಾಗಿದೆ. ಮೊದಲ ಹಂತದಲ್ಲಿ ಶೇ.80ರಷ್ಟಿದ್ದ ಕೇಂದ್ರದ ಅನುದಾನ, ಹಂತ 2ಎ/2ಬಿಗೆ ಶೇ.14ಕ್ಕೆ ಇಳಿಕೆಯಾಗಿದೆ. ಭೂಸ್ವಾಧೀನ, ವೆಚ್ಚ ಹೆಚ್ಚಳ, ವಿದೇಶಿ ಸಾಲ ಮರುಪಾವತಿ ಹಾಗೂ ರೂಪಾಯಿ ಮೌಲ್ಯ ಕುಸಿತದ ಹೊರೆಯನ್ನು ರಾಜ್ಯವೇ ಹೊರುತ್ತಿದೆ. ಅಲ್ಲದೆ, ಬಿಎಂಆರ್‌ಸಿಎಲ್ ನಗದು ನಷ್ಟ ಭರಿಸಲು ಈ ವರ್ಷ 1,046 ಕೋಟಿ ಪಾವತಿಸಲಾಗಿದೆ. ಹೀಗಾಗಿ, ಮೆಟ್ರೋ ಯೋಜನೆಗಳಿಗೆ ಕೇಂದ್ರದ ಅನುದಾನ ಹೆಚ್ಚಿಸುವಂತೆ ಹಾಗೂ 22 ತಿಂಗಳಿಂದ ಬಾಕಿ ಇರುವ ಸರ್ಜಾಪುರ-ಹೆಬ್ಬಾಳ (ರೆಡ್ ಲೈನ್) ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿಯವರಿಗೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

 


Share this with Friends

Related Post