Wed. Nov 11th, 2026

ಸುಳ್ಳು ಮಾಹಿತಿ ಹರಡಿದ ಆರೋಪ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು

Share this with Friends

ಬೆಂಗಳೂರು: ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ದಾರಿತಪ್ಪಿಸುವ ಹಾಗೂ ಸುಳ್ಳು ಮಾಹಿತಿ ಹರಡುವ ಮೂಲಕ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ, ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.

ಬಿಹಾರ ಮತ್ತು ಹರಿಯಾಣದಲ್ಲಿ ಭಾರಿ ಪ್ರಮಾಣದ ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹೆಸರನ್ನು ಅನಗತ್ಯವಾಗಿ ತಳಕು ಹಾಕಿ ಸಚಿವರು ಪೋಸ್ಟ್ ಮಾಡಿದ್ದಾರೆ. ಸತ್ಯಕ್ಕೆ ದೂರವಾದ ಈ ಹೇಳಿಕೆಗಳು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ, ಅನುಮಾನ ಮತ್ತು ಗುಂಪುಗಳ ನಡುವೆ ದ್ವೇಷ ಮೂಡಿಸುವ ಉದ್ದೇಶ ಹೊಂದಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಎಫ್‌ಐಆರ್ ಮತ್ತು ತನಿಖೆಗೆ ಆಗ್ರಹ:

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 192, 196 ಮತ್ತು 353ರ ಅಡಿಯಲ್ಲಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ದೂರುದಾರರು ಕೋರಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಗೃಹ ಸಚಿವರೇ ಇಂತಹ ತಪ್ಪು ಮಾಹಿತಿ ಹರಡುವುದು ಗಂಭೀರ ವಿಚಾರವಾಗಿದೆ. ಸಾಮಾನ್ಯ ನಾಗರಿಕರಿಗೆ ಅನ್ವಯವಾಗುವ ಕಾನೂನು ಮಾನದಂಡಗಳೇ ಸಚಿವರಿಗೂ ಅನ್ವಯವಾಗಬೇಕು. ಸಾಂವಿಧಾನಿಕ ಹುದ್ದೆಯು ಕ್ರಿಮಿನಲ್ ತನಿಖೆಯಿಂದ ವಿನಾಯಿತಿ ನೀಡುವುದಿಲ್ಲ. ಹೀಗಾಗಿ, ಸಂಬಂಧಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಸ್ವತಂತ್ರ ಹಾಗೂ ನ್ಯಾಯಯುತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿವಾದದ ಹಿನ್ನೆಲೆ ಏನು?

ಇತ್ತೀಚೆಗೆ ಬಿಹಾರದ ಭೋಜ್‌ಪುರ ಹಾಗೂ ಹರಿಯಾಣದ ಝಜ್ಜರ್ ಬಳಿ ಪೊಲೀಸರು ಅಂತರರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲವನ್ನು ಭೇದಿಸಿ ಒಟ್ಟು 44,250 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾದವರು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿದ್ದಾರೆ ಎಂಬ ವರದಿಗಳಿವೆ ಎಂದು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಈ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿ ಉತ್ತರ ನೀಡಬೇಕು ಎಂದು ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ, ತನಿಖೆ ನಡೆಸುತ್ತಿರುವ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಸಂಘಟನೆಯ ಪಾತ್ರ ಇದುವರೆಗೆ ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post