ಶಿವಮೊಗ್ಗ: ಜಮೀನು ಮಂಜೂರಾತಿ ಹಾಗೂ ಖಾತೆ ಮಾಡಿಕೊಡುವ ವಿಚಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಲಂಚ ಪಡೆದು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಮನನೊಂದ ರೈತರೊಬ್ಬರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿದ್ದ ಆಲದ ಮರವೇರಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಶಿವಮೊಗ್ಗ ತಾಲ್ಲೂಕಿನ ರಾಮಿನಕೊಪ್ಪ ಗ್ರಾಮದ ನಿವಾಸಿ ನಾಗರಾಜ್ ಎಂಬುವವರೇ ಮರವೇರಿ ಆಕ್ರೋಶ ವ್ಯಕ್ತಪಡಿಸಿದ ರೈತ. ರಾಮಿನಕೊಪ್ಪ ಗ್ರಾಮದ ಸುಮಾರು 12 ಕುಟುಂಬಗಳ ಜಮೀನು ಮಂಜೂರಾತಿ ಮತ್ತು ಖಾತೆ ಬದಲಾವಣೆಗಾಗಿ ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಲ್ಲದೆ, ಈ ಕೆಲಸಕ್ಕಾಗಿ ಸುಮಾರು 25 ಲಕ್ಷ ರೂ. ಹಣ ಪಡೆದಿದ್ದರೂ ಖಾತೆ ಮಾಡಿಕೊಡದೆ ವಂಚಿಸಲಾಗಿದೆ ಎಂದು ನಾಗರಾಜ್ ಹಾಗೂ ಜೊತೆಯಲ್ಲಿದ್ದ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ನಾಲ್ಕು ಗಂಟೆಗಳ ಹೈಡ್ರಾಮಾ, ಸುರಕ್ಷಿತ ರಕ್ಷಣೆ:
ಅಧಿಕಾರಿಗಳ ಧೋರಣೆಯಿಂದ ಬೇಸತ್ತ ನಾಗರಾಜ್, 12 ಕುಟುಂಬಗಳ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ದಿಢೀರನೆ ಅಲ್ಲಿದ್ದ ಎತ್ತರದ ಆಲದ ಮರವನ್ನು ಏರಿ ಕುಳಿತುಕೊಂಡರು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕ ಹಾಗೂ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಮರದ ಕೆಳಗೆ ಸುರಕ್ಷತಾ ಬಲೆ ಅಳವಡಿಸಿ ಮುನ್ನೆಚ್ಚರಿಕೆ ವಹಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಅಧಿಕಾರಿಗಳು, ಪೊಲೀಸರು ಮತ್ತು ಗ್ರಾಮಸ್ಥರು ರೈತನ ಮನವೊಲಿಸುವ ಪ್ರಯತ್ನ ನಡೆಸಿದರು. ಅಂತಿಮವಾಗಿ, ಅಗ್ನಿಶಾಮಕ ದಳದ ಠಾಣಾಧಿಕಾರಿ ಹುಸೇನ್ ಅವರ ನೇತೃತ್ವದ ತಂಡವು ಎತ್ತರದ ಏಣಿಯ ಸಹಾಯದಿಂದ ಮರವೇರಿ, ನಾಗರಾಜ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಸ್ಥಳದಲ್ಲಿದ್ದ ಗ್ರಾಮಸ್ಥರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಬಡ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

