Thu. Nov 12th, 2026

ನವೆಂಬರ್ 14ರಿಂದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ: 5 ಸಾವಿರ ಕ್ರೀಡಾಪಟುಗಳು ಭಾಗಿ

Share this with Friends

ಬೆಂಗಳೂರು: ಮುಂಬರುವ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸಬೇಕು ಎಂಬುದು ತಮ್ಮ ಕನಸಾಗಿದ್ದು, ಯುವ ಪ್ರತಿಭೆಗಳನ್ನು ಗುರುತಿಸಲು ‘ಮಿನಿ ಕರ್ನಾಟಕ ಕ್ರೀಡಾಕೂಟ’ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್ ಹೇಳಿದ್ದಾರೆ.

ಗುರುವಾರ ಕರ್ನಾಟಕ ಒಲಿಂಪಿಕ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೆಒಎ ಸಹಯೋಗದಲ್ಲಿ ನವೆಂಬರ್ 14ರಿಂದ 21ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ 5ನೇ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

27 ಕ್ರೀಡೆಗಳು, 5 ಸಾವಿರ ಕ್ರೀಡಾಪಟುಗಳು:

2020ರಲ್ಲಿ ಆರಂಭವಾದ ಈ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಸುಮಾರು 5,000 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಸ್ಪರ್ಧಾತ್ಮಕ ವಾತಾವರಣಕ್ಕೆ ಒಗ್ಗಿಕೊಳ್ಳಲು ಹಾಗೂ ಭವಿಷ್ಯದ ತಾರೆಯರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಲು ಈ ಕೂಟ ಸಹಕಾರಿಯಾಗಲಿದೆ ಎಂದರು.

ಒಲಿಂಪಿಕ್ಸ್ ಸಿದ್ಧತೆಗೆ ₹10 ಲಕ್ಷ ಪ್ರೋತ್ಸಾಹಧನ:

ರಾಜ್ಯ ಸರ್ಕಾರವು ‘ಒಲಿಂಪಿಕ್ಸ್ ಗುರಿ’ ಯೋಜನೆಯಡಿ ಒಲಿಂಪಿಕ್ಸ್‌ಗೆ ತಯಾರಿ ನಡೆಸುವ ಕ್ರೀಡಾಪಟುಗಳಿಗೆ ತಲಾ ₹10 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ. ಈ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಗೋವಿಂದರಾಜ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು. ಇದೇ ವೇಳೆ ಕ್ರೀಡಾಕೂಟದ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಲಾಯಿತು.

ಕ್ರೀಡಾಕೂಟದಲ್ಲಿ ನಡೆಯಲಿರುವ 27 ಸ್ಪರ್ಧೆಗಳು

ಅಥ್ಲೆಟಿಕ್ಸ್, ಆರ್ಚರಿ, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಕಯಾಕಿಂಗ್ ಮತ್ತು ಕೆನೋಯಿಂಗ್, ಗಾಲ್ಫ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್, ಹಾಕಿ, ಜೂಡೋ, ಖೋ-ಖೋ, ಕಬಡ್ಡಿ, ಲಾನ್ ಟೆನ್ನಿಸ್, ವಾಲಿಬಾಲ್, ನೆಟ್‌ಬಾಲ್, ಈಜು, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ರೈಡಿಂಗ್, ರೈಫಲ್ ಶೂಟಿಂಗ್, ರೆಸ್ಲಿಂಗ್, ವುಶು ಹಾಗೂ ವೆಯ್ಟ್ ಲಿಫ್ಟಿಂಗ್.

 

 


Share this with Friends

Related Post