Thu. Nov 12th, 2026

ಬಳಸಿದ ಅಡುಗೆ ಎಣ್ಣೆಯ ಮರುಬಳಕೆಗೆ ಬ್ರೇಕ್: ರಾಜ್ಯಾದ್ಯಂತ ‘ಟ್ರೇಸಬಿಲಿಟಿ ಆ್ಯಪ್’ ಜಾರಿ ಎಂದ ಯು.ಟಿ. ಖಾದರ್

Share this with Friends

ಬೆಂಗಳೂರು: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಆಹಾರ ತಯಾರಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳನ್ನು ತಡೆಯಲು ರಾಜ್ಯಾದ್ಯಂತ ‘ಟ್ರೇಸಬಿಲಿಟಿ ಆ್ಯಪ್’ (Traceability App) ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಈ ಹೊಸ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿ ಸೇರಿದಂತೆ ಎಲ್ಲಾ ಆಹಾರ ಉದ್ದಿಮೆದಾರರು ಬಳಸಿದ ಅಡುಗೆ ಎಣ್ಣೆಯನ್ನು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ (FSSAI) ಮಾನ್ಯತೆ ಪಡೆದ ರುಕೋ (RUCO) ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಬೇಕು ಎಂದರು.

ಎಣ್ಣೆಯ ಲೆಕ್ಕಾಚಾರ ಮತ್ತು ವಿಲೇವಾರಿ ಕಡ್ಡಾಯ:

ಕಡ್ಡಾಯ ವಾಪಸಾತಿ: ಹೋಟೆಲ್‌ಗಳು 100 ಲೀಟರ್ ಎಣ್ಣೆ ಬಳಸಿದರೆ ಕನಿಷ್ಠ 15 ಲೀಟರ್ (300-400 ಲೀಟರ್‌ಗೆ 75-100 ಲೀಟರ್) ಬಳಸಿದ ಎಣ್ಣೆಯನ್ನು ಏಜೆನ್ಸಿಗಳಿಗೆ ವಾಪಸ್ ನೀಡುವುದು ಕಡ್ಡಾಯ. ಎಣ್ಣೆಯ ಸಂಗ್ರಹ ಮತ್ತು ಸಾಗಣೆಯ ಪ್ರತಿ ಹಂತವೂ ಆ್ಯಪ್‌ನಲ್ಲಿ ದಾಖಲಾಗಲಿದೆ.

ಬಯೋ-ಡೀಸೆಲ್‌ಗೆ ಬಳಕೆ: ಸಂಗ್ರಹಿಸಿದ ಎಣ್ಣೆ ಸಣ್ಣ ಹೋಟೆಲ್‌ಗಳಿಗೆ ಮರುಮಾರಾಟವಾಗದಂತೆ ಹಾಗೂ ಚರಂಡಿ ಸೇರದಂತೆ ತಡೆಯಲು ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಆರಂಭಿಕ ಕೇಂದ್ರಗಳನ್ನು ತೆರೆಯಲಾಗುವುದು. ಈ ಎಣ್ಣೆಯನ್ನು ಬಯೋ-ಡೀಸೆಲ್ ಹಾಗೂ ಸೋಪ್ ತಯಾರಿಕೆಗೆ ಬಳಸಲಾಗುತ್ತದೆ.

ಗುಣಮಟ್ಟ ಪರೀಕ್ಷೆ: ಕರಿದ ಎಣ್ಣೆಯ ಗುಣಮಟ್ಟ ಪರೀಕ್ಷಿಸಲು ಅಧಿಕಾರಿಗಳಿಗೆ ಟಿಪಿಸಿ (TPC) ಮೀಟರ್‌ಗಳನ್ನು ನೀಡಲಾಗಿದೆ. ಟಿಪಿಸಿ ಪ್ರಮಾಣ 25 ಮೀರಿದರೆ ಆ ಎಣ್ಣೆಯನ್ನು ಅಡುಗೆಗೆ ಬಳಸುವಂತಿಲ್ಲ. 2022ರಿಂದ ಈವರೆಗೆ ರಾಜ್ಯದಲ್ಲಿ 91 ಲಕ್ಷ ಲೀಟರ್‌ಗೂ ಅಧಿಕ ಬಳಸಿದ ಎಣ್ಣೆ ಸಂಗ್ರಹಿಸಲಾಗಿದೆ.

ಮನೆ ಮನೆಯಿಂದಲೂ ಸಂಗ್ರಹ; ನ. 25, 26ಕ್ಕೆ ರಾಷ್ಟ್ರೀಯ ಸಮ್ಮೇಳನ:

ಮುಂದಿನ ಹಂತದಲ್ಲಿ ಹಸಿ ಕಸ, ಒಣ ಕಸ ಸಂಗ್ರಹಿಸುವ ಮಾದರಿಯಲ್ಲೇ ಮನೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನೂ ಸಂಗ್ರಹಿಸಲಾಗುವುದು. ಈ ಕುರಿತು ಚರ್ಚಿಸಲು ನವೆಂಬರ್ 25ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಭೆ ಹಾಗೂ ನವೆಂಬರ್ 26ರಂದು ಆಹಾರ ಸುರಕ್ಷತಾ ಅಧಿಕಾರಿಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಖಾದರ್ ವಿವರಿಸಿದರು. ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಇಲಾಖೆಯ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ದೂರು ನೀಡುವಂತೆ ಅವರು ಮನವಿ ಮಾಡಿದರು.

 

 


Share this with Friends

Related Post