ಬೆಂಗಳೂರು: ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್ ದಾಖಲಿಸಲು ಮತ್ತು ಶುಲ್ಕ ಪಾವತಿಸಲು ನವೆಂಬರ್ 13ರವರೆಗೆ ಅಂತಿಮ ಅವಕಾಶ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಒಟ್ಟು 3,268 ಅಭ್ಯರ್ಥಿಗಳಿಗೆ ಸೀಟು ಹಂಚಿಕೆಯಾಗಿತ್ತು. ಈ ಪೈಕಿ 164 ಅಭ್ಯರ್ಥಿಗಳು ಇದುವರೆಗೂ ಯಾವುದೇ ಚಾಯ್ಸ್ ದಾಖಲಿಸಿಲ್ಲ. ಅಲ್ಲದೆ, 81 ಅಭ್ಯರ್ಥಿಗಳು ಚಾಯ್ಸ್ ದಾಖಲಿಸಿದ್ದರೂ ನಿಗದಿತ ಶುಲ್ಕ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ದಿನಾಂಕ ವಿಸ್ತರಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿ:
ಚಾಯ್ಸ್ ದಾಖಲು: ಸೀಟು ಹಂಚಿಕೆಯಾದವರು ನವೆಂಬರ್ 13ರ ಮಧ್ಯಾಹ್ನ 2 ಗಂಟೆಯೊಳಗೆ ಚಾಯ್ಸ್ ದಾಖಲಿಸಬಹುದು.
ಶುಲ್ಕ ಪಾವತಿ: ಚಾಯ್ಸ್-1 ಮತ್ತು ಚಾಯ್ಸ್-2 ಆಯ್ಕೆ ಮಾಡಿಕೊಂಡವರು ನವೆಂಬರ್ 13ರ ಸಂಜೆ 4 ಗಂಟೆಯೊಳಗೆ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು.
ಕಾಲೇಜು ವರದಿ: ಶುಲ್ಕ ಪಾವತಿಸಿದ ಅಭ್ಯರ್ಥಿಗಳು ನವೆಂಬರ್ 14ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಕಡ್ಡಾಯವಾಗಿ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಸೂಚಿಸಿದೆ
ಪಿಜಿ ಆಯುಷ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ; ನವೆಂಬರ್ 15 ಕೊನೆಯ ದಿನ
ಸ್ನಾತಕೋತ್ತರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ ಹಾಗೂ ಹೋಮಿಯೋಪತಿ (ಆಯುಷ್) ಕೋರ್ಸ್ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ನವೆಂಬರ್ 15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನವೆಂಬರ್ 14ರಿಂದ 17ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

