ಬೆಂಗಳೂರು: ನಿಗದಿತ ಸುರಕ್ಷತೆ ಮತ್ತು ಲೇಬಲ್ ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದ ಸುಮಾರು 13.79 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ರಾಜ್ಯ ಆರೋಗ್ಯ ಇಲಾಖೆಯ ಔಷಧ ನಿಯಂತ್ರಣ ವಿಭಾಗದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನವೆಂಬರ್ 11 ಮತ್ತು 12ರಂದು ಬೆಂಗಳೂರಿನ ಕಾಟನ್‌ಪೇಟೆ ವ್ಯಾಪ್ತಿಯ ಎರಡು ಮಳಿಗೆಗಳ ಮೇಲೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ‘ಮಾಂದೇವ್ ಸರ್ಜಿಫಾರ್ಮಾ ಪ್ರೈವೇಟ್ ಲಿಮಿಟೆಡ್’ ಮಳಿಗೆಯಿಂದ 6,57,031 ಹಾಗೂ ‘ಶ್ರೀ ಮಾಂದೇವ್ ಸರ್ಜಿಕಲ್ಸ್’ ಮಳಿಗೆಯಿಂದ 7,21,590 ಮೌಲ್ಯದ ಉಪಕರಣಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಪ್ತಿಯಾದ ಸಾಮಗ್ರಿಗಳಲ್ಲಿ ಹಿಯರಿಂಗ್ ಏಡ್, ಕ್ಲಿನಿಕಲ್ ಥರ್ಮಾಮೀಟರ್, ಸರ್ಜಿಕಲ್ ಗ್ಲೌಸ್, ಯೂರಿನ್ ಬ್ಯಾಗ್ ಹಾಗೂ ಕಂಪ್ರೆಷನ್ ಸ್ಟಾಕಿಂಗ್ಸ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳು ಸೇರಿವೆ. ಈ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಕಡ್ಡಾಯವಾಗಿ ಇರಬೇಕಾದ ಬ್ಯಾಚ್ ಸಂಖ್ಯೆ, ತಯಾರಿಕೆ ಮತ್ತು ಅವಧಿ ಮುಗಿಯುವ (ಎಕ್ಸ್‌ಪೈರಿ) ದಿನಾಂಕ, ತಯಾರಕರ ವಿವರ, ಪರವಾನಗಿ ಸಂಖ್ಯೆ ಹಾಗೂ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಕುರಿತ ಮಾಹಿತಿಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಸದ್ಯ ವಶಪಡಿಸಿಕೊಂಡ ಉಪಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ:
“ರೋಗಿಗಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಮಾರುಕಟ್ಟೆಗೆ ಬರುವ ಪ್ರತಿಯೊಂದು ವೈದ್ಯಕೀಯ ಉಪಕರಣವೂ ನಿಗದಿತ ಗುಣಮಟ್ಟ ಮತ್ತು ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ. ಸಾರ್ವಜನಿಕರು ವೈದ್ಯಕೀಯ ಉಪಕರಣಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು ಮತ್ತು ಕೊಳ್ಳುವ ಮುನ್ನ ಲೇಬಲ್ ಮೇಲಿನ ಎಕ್ಸ್‌ಪೈರಿ ದಿನಾಂಕ, ಬ್ಯಾಚ್ ಸಂಖ್ಯೆ ಹಾಗೂ ಎಂಆರ್‌ಪಿ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು” ಎಂದು ಯು.ಟಿ. ಖಾದರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

