ಬೆಂಗಳೂರು: ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2026’ ರ ಕರಡು ಅಧಿಸೂಚನೆಯನ್ನು ವಿಶೇಷ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ.
ನವೆಂಬರ್ 12, 2026ರಂದು ಹೊರಡಿಸಲಾದ ಈ ಕರಡು ನಿಯಮಗಳ ಕುರಿತು ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಅಧಿಸೂಚನೆ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಬಹುಮಹಡಿಗಳ ಕಟ್ಟಡ, ಬೆಂಗಳೂರು) ಇವರಿಗೆ ಸಲ್ಲಿಸಲು ಸಾರ್ವಜನಿಕರು ಮತ್ತು ಶಿಕ್ಷಕರಿಗೆ ಅವಕಾಶ ನೀಡಲಾಗಿದೆ.
ಕರಡು ನಿಯಮಗಳ ಪ್ರಮುಖ ಅಂಶಗಳು:
ವರ್ಗಾವಣೆ ಮಿತಿ ನಿಗದಿ: ವಿವಿಧ ವರ್ಗಗಳ ವರ್ಗಾವಣೆಗೆ ವೃಂದವಾರು ಮಿತಿಯನ್ನು ನಿಗದಿಪಡಿಸಲಾಗಿದೆ. ಇದರಂತೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗೆ ಶೇ. 7, ವಲಯ ವರ್ಗಾವಣೆಗೆ ಶೇ. 4, ವಿಭಾಗದೊಳಗಿನ ಕೋರಿಕೆ ವರ್ಗಾವಣೆಗೆ ಶೇ. 2 ಹಾಗೂ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆಗೆ ಶೇ. 2ರಷ್ಟು ಮಿತಿ ನಿಗದಿ ಮಾಡಲಾಗಿದೆ.
ವೈಟೆಡ್ (Weighted) ಅಂಕಗಳ ಲೆಕ್ಕಾಚಾರ: ವರ್ಗಾವಣೆಗಾಗಿ ಶಿಕ್ಷಕರ ಸೇವಾ ಅವಧಿಯನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುವುದು. ‘ಸಿ’ ವಲಯದಲ್ಲಿ ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ 3 ಅಂಕ, ‘ಬಿ’ ವಲಯಕ್ಕೆ 2 ಅಂಕ ಹಾಗೂ ‘ಎ’ ವಲಯಕ್ಕೆ 1 ಅಂಕ ನೀಡಲಾಗುತ್ತದೆ. ಅಲ್ಲದೆ, ಪ್ರಸ್ತುತ ಶಾಲೆಯಲ್ಲಿ 3 ವರ್ಷ ಮೀರಿ ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ ಹೆಚ್ಚುವರಿ 1 ಅಂಕ ಸಿಗಲಿದೆ. 6 ತಿಂಗಳು (180 ದಿನ) ಮತ್ತು ಅದಕ್ಕಿಂತ ಹೆಚ್ಚಿನ ಸೇವೆಯನ್ನು ಒಂದು ಪೂರ್ಣ ವರ್ಷವೆಂದು ಪರಿಗಣಿಸಲಾಗುವುದು.
ನಿರ್ಣಾಯಕ ಹುದ್ದೆಗಳಿಗೆ (Critical Posts) ವಿಶೇಷ ನಿಯಮ: ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ‘ಎ’, ‘ಬಿ’ ಮತ್ತು ‘ಸಿ’ ವಲಯಗಳಲ್ಲಿ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಕ್ರಮವಾಗಿ 2, 4 ಮತ್ತು 6 ಅಂಕಗಳನ್ನು ನೀಡಲಾಗುವುದು. ಈ ಹುದ್ದೆಗಳಿಗೆ ಬರುವ ವರ್ಗಾವಣೆಗೆ ಸಾಮಾನ್ಯ ವರ್ಗಾವಣೆ ಮಿತಿ ಅನ್ವಯಿಸುವುದಿಲ್ಲ ಮತ್ತು ಖಾಲಿ ಹುದ್ದೆಗಳು ಭರ್ತಿಯಾಗುವವರೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಈ ಹುದ್ದೆಗಳಲ್ಲಿ ಶಿಕ್ಷಕರು ಕನಿಷ್ಠ 9 ವರ್ಷ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.
ವೈದ್ಯಕೀಯ ಮತ್ತು ಆದ್ಯತಾ ವರ್ಗಾವಣೆ: ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರು, ಪತಿ/ಪತ್ನಿ ಅಥವಾ ಮಕ್ಕಳು ಹಾಗೂ ಶೇ. 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಸಲ್ಲಿಸಬೇಕು. ಈ ಪ್ರಮಾಣಪತ್ರಗಳ ನೈಜತೆಯನ್ನು ವಿಭಾಗೀಯ ವಿಶೇಷ ಸಮಿತಿಯು ಪರಿಶೀಲಿಸಲಿದೆ. ಗರ್ಭಿಣಿ ಶಿಕ್ಷಕಿ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿಯರು ಸೂಕ್ತ ಪ್ರಮಾಣಪತ್ರಗಳೊಂದಿಗೆ ಆದ್ಯತೆ ಪಡೆಯಬಹುದು.
ಹೆಚ್ಚುವರಿ ಶಿಕ್ಷಕರಿಗೆ ವಿನಾಯಿತಿ ಇಲ್ಲ: ಶಾಲೆಯಲ್ಲಿ ಮಂಜೂರಾದ ಹುದ್ದೆಯ ಅಗತ್ಯವಿಲ್ಲದೆ ‘ಹೆಚ್ಚುವರಿ’ ಎಂದು ಗುರುತಿಸಿ ಬೇರೆ ಶಾಲೆಗೆ ಸ್ಥಳಾಂತರಗೊಂಡರೆ ಅಥವಾ ಹುದ್ದೆ ಹಿಂಪಡೆಯಲ್ಪಟ್ಟರೆ, ಅಂತಹ ಹುದ್ದೆಯಲ್ಲಿರುವ ಶಿಕ್ಷಕರು ನಿಯಮ 10ರ ಅಡಿಯಲ್ಲಿ ಯಾವುದೇ ಆದ್ಯತಾ ವಿನಾಯಿತಿಗೆ ಅರ್ಹರಾಗಿರುವುದಿಲ್ಲ.
ಆನ್ಲೈನ್ ಕೌನ್ಸೆಲಿಂಗ್: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವೃಂದಗಳ ವರ್ಗಾವಣೆ ಪ್ರಕ್ರಿಯೆಯನ್ನು ಆದ್ಯತಾ ಪಟ್ಟಿಗಳ ಅನುಸಾರ ತಂತ್ರಾಂಶದ (ಸಾಫ್ಟ್ವೇರ್) ಮೂಲಕ ಆನ್ಲೈನ್ ಕೌನ್ಸೆಲಿಂಗ್ನಲ್ಲಿಯೇ ನಡೆಸಲಾಗುವುದು ಎಂದು ಕರಡು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

