Fri. Nov 13th, 2026

ಬೆಂಗಳೂರು ದೇಶದ ಆರ್ಥಿಕ ಪ್ರಗತಿಯ ಎಂಜಿನ್; ಕರ್ನಾಟಕದ ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ

Share this with Friends

ಬೆಂಗಳೂರು: ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿಯಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಯ ಎಂಜಿನ್‌ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ನಗರದ ಬಿಳೇಕಹಳ್ಳಿಯ ಐಐಎಂ ಸಭಾಂಗಣದಲ್ಲಿ ಶುಕ್ರವಾರ ಸುಮಾರು 15,600 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಸುಮಾರು 7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಪಿಂಕ್ ಲೈನ್ ಎಲಿವೇಟೆಡ್ ಕಾರಿಡಾರ್‌ಗೆ ಹಸಿರು ನಿಶಾನೆ ತೋರಿ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಬಳಿಕ ಪ್ರಧಾನಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು

ಮೆಟ್ರೋ ಶತಕದ ಮೈಲಿಗಲ್ಲು ಮತ್ತು ಡಿಕೆಶಿಗೆ ಟಾಂಗ್:

ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಪ್ರಧಾನಿ, “ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ಎಂದಿಗೂ ತಾರತಮ್ಯ ಮಾಡಿಲ್ಲ. 2014ರಲ್ಲಿ ನಮ್ಮ ಮೆಟ್ರೋ ಮಾರ್ಗ ಕೇವಲ 17 ಕಿ.ಮೀ. ಇತ್ತು. ಇಂದು ಅದು 100 ಕಿ.ಮೀ. ಗಡಿ ದಾಟಿದೆ. ನಾವು ಶತಕ ಬಾರಿಸುತ್ತಿದ್ದೇವೆ, ಮುಖ್ಯಮಂತ್ರಿ ಶಿವಕುಮಾರ್ ಅವರೇ ಇದನ್ನು ಗಮನಿಸಿ,” ಎಂದು ನಸುನಗುತ್ತಾ ಹೇಳಿದರು. ಪಿಂಕ್ ಲೈನ್ ಮೆಟ್ರೋ ಮಾರ್ಗದಿಂದ ಐಐಎಂ ಬೆಂಗಳೂರು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಮತ್ತು ತಂತ್ರಜ್ಞಾನ ಕೇಂದ್ರಗಳಿಗೆ ಸಂಪರ್ಕ ಸುಲಭವಾಗಲಿದ್ದು, ಲಕ್ಷಾಂತರ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದರು.

ಕನ್ನಡದಲ್ಲಿ ಮಾತು ಆರಂಭ, ಅನಂತ ಕುಮಾರ್ ಸ್ಮರಣೆ:

ಭಾಷಣದ ಆರಂಭದಲ್ಲಿ ಕನ್ನಡದಲ್ಲೇ “ಬೆಂಗಳೂರಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು” ಎಂದು ಶುಭಾಶಯ ಕೋರಿದ ಮೋದಿ, ನಾಡಪ್ರಭು ಕೆಂಪೇಗೌಡ ಮತ್ತು ಅಣ್ಣಮ್ಮ ತಾಯಿಗೆ ನಮನ ಸಲ್ಲಿಸಿದರು. ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಅವರನ್ನು ಸ್ಮರಿಸಿದ ಪ್ರಧಾನಿ, ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಯಿಂದ ಇಂದು ಅವರ ಆತ್ಮಕ್ಕೆ ಸಂತಸವಾಗಿರಬಹುದು ಎಂದು ಭಾವುಕರಾಗಿ ನುಡಿದರು.

ಮೂಲಸೌಕರ್ಯದಿಂದ ಬಡತನ ನಿರ್ಮೂಲನೆ:

ದೇಶದ ಆರ್ಥಿಕ ಪ್ರಗತಿಯಲ್ಲಿ ಮೂಲಸೌಕರ್ಯ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದ ಮೋದಿ, “ಉತ್ತಮ ಸಂಪರ್ಕದಿಂದ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಅಭಿವೃದ್ಧಿಯ ಅವಕಾಶಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಬಡತನದ ವಿರುದ್ಧದ ಹೋರಾಟ ಬಲಗೊಳ್ಳುತ್ತದೆ. ಇದೇ ಕಾರಣಕ್ಕೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ,” ಎಂದು ತಿಳಿಸಿದರು. ವಿಕಸಿತ ಕರ್ನಾಟಕದ ಮೂಲಕ ವಿಕಸಿತ ಭಾರತ ನಿರ್ಮಾಣವಾಗಲಿದ್ದು, ‘ಚಿಪ್‌ನಿಂದ ಶಿಪ್‌ವರೆಗೆ’ ಭಾರತದಲ್ಲೇ ಉತ್ಪಾದನೆ ಹೆಚ್ಚುತ್ತಿದೆ ಹಾಗೂ ಬೆಂಗಳೂರಿನಲ್ಲಿ ಹಲವು ಕೃತಕ ಬುದ್ಧಿಮತ್ತೆ (AI) ಕೇಂದ್ರಗಳು ತಲೆ ಎತ್ತುತ್ತಿವೆ ಎಂದು ಶ್ಲಾಘಿಸಿದರು.

ಪ್ರಧಾನಿ ಚಾಲನೆ ನೀಡಿದ ಇತರ ಪ್ರಮುಖ ಯೋಜನೆಗಳು:

ಇದೇ ವೇದಿಕೆಯಿಂದ ಪ್ರಧಾನಿ ಮೋದಿ ಅವರು ರಾಜ್ಯದ ರೈಲ್ವೆ ಮತ್ತು ಇಂಧನ ಕ್ಷೇತ್ರದ ಹಲವು ಬೃಹತ್ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು:

ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು-ಮಂಗಳೂರು-ಮಡಗಾಂವ್ (ಗೋವಾ) ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.

ರೈಲ್ವೆ ಅಭಿವೃದ್ಧಿ: ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳನ್ನು ಉದ್ಘಾಟಿಸಿದರು. ಜೊತೆಗೆ ಬಾಗಲಕೋಟೆ-ವಂದಾಳ ಜೋಡಿ ರೈಲು ಮಾರ್ಗ ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನು ದೇಶಕ್ಕೆ ಸಮರ್ಪಿಸಿದರು.

ಇಂಧನ ಯೋಜನೆಗಳು: ಮಂಗಳೂರಿನಲ್ಲಿ 850 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ, ದೇವನಗುಂದಿ ಮಾರ್ಕೆಟಿಂಗ್ ಟರ್ಮಿನಲ್ ಹಾಗೂ ಕೊಪ್ಪಳ, ಗದಗ ಮತ್ತು ಬೀದರ್‌ನ ಬೃಹತ್ ವಿದ್ಯುತ್ ಪ್ರಸರಣ ಯೋಜನೆಗಳಿಗೆ ಚಾಲನೆ ನೀಡಿದರು. ಹರಳಕುಂಟೆಯಲ್ಲಿ ನಿರ್ಮಾಣವಾಗಲಿರುವ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

 


Share this with Friends

Related Post