ಬೆಂಗಳೂರು: ರಾಜ್ಯದ ಐಟಿ-ಬಿಟಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮೌನ ವಹಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಕನ್ನಡಿಗರ ಬದುಕು ಮತ್ತು ಭವಿಷ್ಯದ ಪ್ರಶ್ನೆ ಎದುರಾದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಮೌನಕ್ಕೆ ಶರಣಾಗುತ್ತಿವೆ. ವಿರೋಧ ಪಕ್ಷದ ನಾಯಕನ ಹುದ್ದೆ ಕೇವಲ ರಾಜಕೀಯ ಟೀಕೆಗಳಿಗೆ ಸೀಮಿತವಾಗಬಾರದು. ಜನರ ಹಕ್ಕುಗಳಿಗೆ ಧಕ್ಕೆಯಾದಾಗ ಸರ್ಕಾರವನ್ನು ಪ್ರಶ್ನಿಸುವುದು ಅವರ ಜವಾಬ್ದಾರಿ ಎಂದು ಕಿಡಿಕಾರಿದ್ದಾರೆ.
ಅರ್ಹ ಸ್ಥಳೀಯರಿಗೆ ಉದ್ಯೋಗ ಸಿಗಬೇಕೆಂದು ಕರವೇ ಈಗಾಗಲೇ ‘ಆಗ್ರಹ ಅಭಿಯಾನ’ ನಡೆಸುತ್ತಿದೆ. ನೂರಾರು ಕಂಪನಿಗಳಿಗೆ ಭೇಟಿ ನೀಡಿ ಕನ್ನಡಿಗರ ಉದ್ಯೋಗದ ಲೆಕ್ಕ ಕೇಳುತ್ತಿದೆ. ಆದರೆ ಅಶೋಕ್ ಅವರು ಇದುವರೆಗೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಐಟಿ-ಬಿಟಿ ಕಂಪನಿಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ ಎಂಬ ಬಗ್ಗೆ ಕಾರ್ಮಿಕ ಇಲಾಖೆ ಸಮೀಕ್ಷೆ ನಡೆಸಲು ಸರ್ಕಾರವೇ ಹಿಂದೇಟು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಉದ್ಯೋಗ ಪ್ರಾತಿನಿಧ್ಯ ಕಾಯ್ದೆ ಜಾರಿಗೆ ಒತ್ತಡ ಹೇರಬೇಕಿತ್ತು ಎಂದು ಹೇಳಿದ್ದಾರೆ.
ನಮ್ಮ ಹೋರಾಟ ಯಾವುದೇ ಭಾಷಿಕರ ವಿರುದ್ಧವಲ್ಲ. ಅಗತ್ಯ ವಿದ್ಯಾರ್ಹತೆ ಮತ್ತು ಕೌಶಲ್ಯ ಹೊಂದಿರುವ ಸ್ಥಳೀಯ ಯುವಜನರಿಗೆ ಅವರದೇ ನೆಲದಲ್ಲಿ ಆದ್ಯತೆ ಸಿಗಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಉದ್ಯಮಿಗಳ ಒತ್ತಡಕ್ಕೆ ಮಣಿಯದೆ ಅಶೋಕ್ ಅವರು ವಿಧಾನಸಭೆಯಲ್ಲಿ ಕನ್ನಡಿಗರ ಪರ ಧ್ವನಿ ಎತ್ತಬೇಕು. ಕನ್ನಡಿಗರ ಉದ್ಯೋಗದ ಹೋರಾಟಕ್ಕೆ ತಮ್ಮ ಬೆಂಬಲ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.

