Sat. Nov 14th, 2026

ಕೈಗಾರಿಕಾ ಘಟಕಗಳ ಸನಿಹದಲ್ಲೇ ಕಾರ್ಮಿಕರಿಗೆ ವಸತಿ ಸೌಲಭ್ಯ: ‘ಶ್ರಮಿಕ್ ನಿವಾಸ್’ ಯೋಜನೆಗೆ ಚಾಲನೆ 

Share this with Friends

ಬೆಂಗಳೂರು: ತಯಾರಿಕಾ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕೈಗಾರಿಕೆಗಳ ಸಮೀಪದಲ್ಲೇ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸುವ ಮಹತ್ವಾಕಾಂಕ್ಷೆಯ ‘ಶ್ರಮಿಕ್ ನಿವಾಸ್’ ನೀತಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ. ಪಾಟೀಲ, “ಶ್ರಮಿಕ ವರ್ಗಕ್ಕೆ ನೆಮ್ಮದಿಯ ಸೂರು ಒದಗಿಸುವುದರಿಂದ ಅವರ ದೈನಂದಿನ ಪ್ರಯಾಣದ ಒತ್ತಡ ಕಡಿಮೆಯಾಗಿ ಕೈಗಾರಿಕೆಗಳ ಉತ್ಪಾದಕತೆ ಹೆಚ್ಚಾಗುತ್ತದೆ. ಹೆಚ್ಚು ಕಾರ್ಮಿಕರಿರುವ ಕೈಗಾರಿಕೆಗಳ ಬಳಿಯೇ ಡಾರ್ಮಿಟರಿ, ಸಿಂಗಲ್ ಮತ್ತು ಡಬಲ್ ಬೆಡ್‌ರೂಮ್ ಮನೆಗಳನ್ನು ನಿರ್ಮಿಸಿ ಉಚಿತವಾಗಿ ಅಥವಾ ಕೈಗೆಟುಕುವ ಬಾಡಿಗೆಗೆ ನೀಡಲಾಗುವುದು” ಎಂದು ವಿವರಿಸಿದ್ದಾರೆ.

ಸಬ್ಸಿಡಿ ಮತ್ತು ವಸತಿ ಮಾದರಿಯ ಪ್ರಮುಖ ಅಂಶಗಳು:

ಸಬ್ಸಿಡಿ ವಿವರ: 100 ಉದ್ಯೋಗಿಗಳಿಗೆ ವಸತಿ ಕಲ್ಪಿಸುವ ಕಂಪನಿಗಳಿಗೆ 1 ಕೋಟಿ, 1,000 ಉದ್ಯೋಗಿಗಳಿಗೆ 10 ಕೋಟಿ ಹಾಗೂ 2,500 ಕಾರ್ಮಿಕರಿಗೆ ಸೂರು ಒದಗಿಸಿದರೆ ಗರಿಷ್ಠ 25 ಕೋಟಿವರೆಗೆ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ. ಕಾರ್ಮಿಕರು ವಾಸ ಆರಂಭಿಸಿದ ದಿನದಿಂದ 3 ವರ್ಷಗಳಲ್ಲಿ 3 ಸಮಾನ ಕಂತುಗಳಲ್ಲಿ ಈ ಸಹಾಯಧನ ವಿತರಿಸಲಾಗುವುದು.

ಮೂರು ಮಾದರಿಯ ವಸತಿ: ಕೆಐಎಡಿಬಿ (KIADB) ಮಂಜೂರು ಮಾಡಿರುವ ನಿವೇಶನದ ಒಳಗಡೆಯೇ ಗರಿಷ್ಠ 10 ಚ.ಮೀ. ವಿಸ್ತೀರ್ಣದ ಡಾರ್ಮಿಟರಿ, 30 ಚ.ಮೀ.ವರೆಗಿನ ಸಿಂಗಲ್ ಬೆಡ್‌ರೂಮ್ ಹಾಗೂ 60 ಚ.ಮೀ.ವರೆಗಿನ ಡಬಲ್ ಬೆಡ್‌ರೂಮ್ ಮನೆಗಳನ್ನು ನಿರ್ಮಿಸಬೇಕು.

ಮೂಲಭೂತ ಸೌಕರ್ಯ: ಡಾರ್ಮಿಟರಿಯಲ್ಲಿ ಹಾಸಿಗೆ, ಟೇಬಲ್, ಲಾಕರ್, ಸಾಮೂಹಿಕ ಅಡುಗೆಮನೆ ಮತ್ತು ಶೌಚಾಲಯ ಇರಲಿವೆ. ಮನೆಗಳಲ್ಲಿ ಲಿವಿಂಗ್ ರೂಮ್, ಅಡುಗೆಮನೆ ಹಾಗೂ ಸ್ನಾನಗೃಹದ ವ್ಯವಸ್ಥೆ ಇದ್ದು, ಕೈಗಾರಿಕಾ ದರದಲ್ಲೇ ನೀರು ಮತ್ತು ವಿದ್ಯುತ್ ಪೂರೈಸಲಾಗುವುದು.

ಕಾಯಂ ಉದ್ಯೋಗಿಗಳಿಗೆ ಮಾತ್ರ ಅವಕಾಶ:

ವಾರ್ಷಿಕ ಗರಿಷ್ಠ 10 ಸಾವಿರ ಕಾರ್ಮಿಕರಿಗೆ ವಸತಿ ಒದಗಿಸುವ ಗುರಿ ಹೊಂದಲಾಗಿದೆ. ಕಂಪನಿಗಳ ಕಾಯಂ ಉದ್ಯೋಗಿಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಅವರ ಅವಲಂಬಿತರಿಗೆ ಇದರಡಿ ಅವಕಾಶವಿರುವುದಿಲ್ಲ. “ಕಾರ್ಮಿಕರು ಕೈಗಾರಿಕೆಗಳ ಅವಿಭಾಜ್ಯ ಅಂಗವಾಗಿದ್ದು, ಅವರ ನೆಮ್ಮದಿಯ ಬದುಕಿನಿಂದ ರಾಜ್ಯದ ಆರ್ಥಿಕತೆಗೂ ಬಲ ಬರಲಿದೆ” ಎಂದು ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

 


Share this with Friends

Related Post