Sat. Nov 14th, 2026

ಹಾಸನ ಡಿಸಿ ಕಚೇರಿ ಭ್ರಷ್ಟಾಚಾರ ಆರೋಪ: ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ, ವಾಟ್ಸಾಪ್ ಚಾಟ್‌ನಲ್ಲಿದ್ದ ಹೆಸರುಗಳನ್ನಷ್ಟೇ ಹೇಳಿದ್ದೇನೆ ಎಂದ ಎಚ್‌ಡಿಕೆ

Share this with Friends

ಹಾಸನ: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಲಭ್ಯವಾದ ವಾಟ್ಸಾಪ್ ಚಾಟ್ ದಾಖಲೆಗಳನ್ನು ಆಧರಿಸಿ ತನಿಖೆಗೆ ಒತ್ತಾಯಿಸಿದ್ದೇನೆಯೇ ಹೊರತು, ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿ ಹಣ ಪಡೆದಿದ್ದಾರೆ ಎಂದು ಆರೋಪಿಸಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಹಾಸನ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಹಣ ಪಡೆದಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಕೇವಲ ಡಿಸಿ ಆಪ್ತ ಸಹಾಯಕನ ವಾಟ್ಸಾಪ್ ಚಾಟ್‌ನಲ್ಲಿ ಉಲ್ಲೇಖವಾಗಿರುವ ಹೆಸರುಗಳ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ಎಂದಷ್ಟೇ ಆಗ್ರಹಿಸಿದ್ದೇನೆ. ಆದರೆ, ನಾನು ಯಾರ ಮೇಲೂ ಬೊಟ್ಟು ಮಾಡದಿದ್ದರೂ ಅವರಾಗಿಯೇ ಪೈಪೋಟಿಗೆ ಬಿದ್ದು ಸ್ಪಷ್ಟನೆ ನೀಡುತ್ತಿರುವುದು ಆಶ್ಚರ್ಯ ತಂದಿದೆ” ಎಂದು ವ್ಯಂಗ್ಯವಾಡಿದರು.

ತನಿಖೆಗೂ ಮೊದಲೇ ಸಿಎಂ ಕ್ಲೀನ್ ಚಿಟ್ ನೀಡಿದ್ದು ಸರಿಯೇ?:

ಪ್ರಕರಣದಲ್ಲಿ ಯಾರೂ ಪಾಲುದಾರರಲ್ಲದಿದ್ದರೆ ತನಿಖೆಗೆ ಏಕೆ ಭಯಪಡಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ಹಣ ಹಂಚಿಕೆಯಲ್ಲಿ ಭಾಗಿಯಾಗಿರುವವರ ಹೆಸರುಗಳು ವಾಟ್ಸಾಪ್ ಚಾಟ್‌ನಲ್ಲಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ. ಆದರೆ ತನಿಖೆ ಆರಂಭವಾಗುವ ಮೊದಲೇ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿಬಿಟ್ಟಿದ್ದಾರೆ. ಸಿಎಂ ಅವರೇ ಕ್ಲೀನ್ ಚಿಟ್ ಕೊಟ್ಟ ಮೇಲೆ ನಾನು ತನಿಖೆಗೆ ಆಗ್ರಹಿಸಿ ಏನು ಪ್ರಯೋಜನ?” ಎಂದು ಬೇಸರ ವ್ಯಕ್ತಪಡಿಸಿದರು.

ನಿಯಮ ಮೀರಿ ವರ್ತಿಸುತ್ತಿರುವ ಅಧಿಕಾರಿಗಳಿಗೆ ಕಾಲವೇ ಉತ್ತರ ನೀಡಲಿದೆ:

ಜಿಲ್ಲಾಧಿಕಾರಿಗಳು ತಮ್ಮ ಇತಿಮಿತಿಗಳನ್ನು ಮೀರಿ ವರ್ತಿಸುತ್ತಿದ್ದಾರೆ ಮತ್ತು ವಾಟ್ಸಾಪ್ ಸ್ಟೇಟಸ್‌ಗಳನ್ನು ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸರ್ಕಾರವೇ ಅಧಿಕಾರಿಗಳಿಗೆ ನಿಯಮ ಮೀರಿ ನಡೆಯಲು ಕುಮ್ಮಕ್ಕು ನೀಡುತ್ತಿದೆ. ಇಂತಹ ಸ್ಟೇಟಸ್‌ಗಳಿಗೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಂಗನಾಥಸ್ವಾಮಿ ಸನ್ನಿಧಾನದಲ್ಲಿ ನಿಂತು ಹೇಳುತ್ತಿದ್ದೇನೆ, ಕಾಲ ಬಂದಾಗ ಇಂತಹ ನಡವಳಿಕೆ ಇರುವವರಿಗೆ ದೇವರೇ ತಕ್ಕ ಫಲ ನೀಡುತ್ತಾನೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ” ಎಂದು ಎಚ್ಚರಿಕೆ ನೀಡಿದರು.

 

 


Share this with Friends

Related Post