Mon. Nov 16th, 2026

ಸಿದ್ಧಸಿರಿ ಸೊಸೈಟಿ ಮೇಲೆ ಯಾವುದೇ ಐಟಿ, ಇಡಿ ದಾಳಿಯಾಗಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ

Share this with Friends

ವಿಜಯಪುರ: ತಮ್ಮ ಅಧ್ಯಕ್ಷತೆಯ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯ ಮೇಲೆ ಆದಾಯ ತೆರಿಗೆ (IT) ಅಥವಾ ಜಾರಿ ನಿರ್ದೇಶನಾಲಯದ (ED) ಯಾವುದೇ ದಾಳಿಗಳು ನಡೆದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ವಿರುದ್ಧ ರಾಜಕೀಯ ದುರುದ್ದೇಶದಿಂದ ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಪ್ರಾಮಾಣಿಕ ರಾಜಕಾರಣಿ ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ನಮ್ಮ ಸಂಸ್ಥೆಯ ಹೆಸರಿಗೆ ಮಸಿ ಬಳಿಯಲು ದೊಡ್ಡ ಮಟ್ಟದ ಸಂಚು ನಡೆದಿದೆ” ಎಂದು ಆರೋಪಿಸಿದರು. ರಾಜ್ಯ ಮಟ್ಟದಲ್ಲಿದ್ದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ಕೇಂದ್ರ ಮಟ್ಟದ (ಮಲ್ಟಿ-ಸ್ಟೇಟ್) ಸಹಕಾರಿ ಸಂಸ್ಥೆಯಾಗಿ ಪರಿವರ್ತನೆಯಾಗಿ ಇನ್ನೂ ಒಂದು ವರ್ಷವೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮತ್ತು ಠೇವಣಿದಾರರಲ್ಲಿ ಗೊಂದಲ ಮೂಡಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಅವರು ಹೇಳಿದರು.

ಸಿದ್ಧಸಿರಿ ಸೊಸೈಟಿ ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತ; 

ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ, “ನಮ್ಮ ಸಂಸ್ಥೆಯ ವಿರುದ್ಧ ವ್ಯವಸ್ಥಿತ ರಾಜಕೀಯ ಸಂಚು ನಡೆಯುತ್ತಿದೆ. ರಾಜ್ಯ ಮಟ್ಟದಲ್ಲಿದ್ದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ಕೇಂದ್ರ ಮಟ್ಟದ (ಮಲ್ಟಿ-ಸ್ಟೇಟ್) ಸೊಸೈಟಿಯಾಗಿ ಮೇಲ್ದರ್ಜೆಗೇರಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಸಂಸ್ಥೆಯ ಬೆಳವಣಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸುತ್ತಿವೆ” ಎಂದು ಕಿಡಿಕಾರಿದರು.

ಕೇಂದ್ರದ ನೋಟಿಸ್ ಬಗ್ಗೆ ಸ್ಪಷ್ಟನೆ:

ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಕುರಿತು ವಿವರ ನೀಡಿದ ಸೊಸೈಟಿಯ ಕಾನೂನು ಸಲಹೆಗಾರ ಸತೀಶ್ ಚಂದ್ರ ಕುಲಕರ್ಣಿ ಹಾಗೂ ಆಡಳಿತ ಮಂಡಳಿ, “ಸೊಸೈಟಿಯ ಮೇಲೆ ಯಾವುದೇ ತನಿಖಾ ಸಂಸ್ಥೆಗಳ ದಾಳಿ ನಡೆದಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸಹಕಾರಿ ಸಂಘಗಳ ನಿಬಂಧಕರಿಂದ (CRCS) ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿ 11 ಅಂಶಗಳ ಕುರಿತು ಮಾಹಿತಿ ಕೇಳಿ ಸಾಮಾನ್ಯ ಪತ್ರ ಬಂದಿತ್ತು. ಅದಕ್ಕೆ ಸೆಪ್ಟೆಂಬರ್ ತಿಂಗಳಲ್ಲೇ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಂತರಿಕ ಲೆಕ್ಕಪರಿಶೋಧಕರು ನವದೆಹಲಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ಉತ್ತರ ಸಲ್ಲಿಸಿದ್ದಾರೆ” ಎಂದು ತಿಳಿಸಿದರು.

ಸಂಸ್ಥೆಯ ಕಾನೂನು ತಂಡದಿಂದಲೂ ಸ್ಪಷ್ಟನೆ:

ಈ ಕುರಿತು ಮಾಹಿತಿ ನೀಡಿರುವ ಸೊಸೈಟಿಯ ಕಾನೂನು ಸಲಹೆಗಾರರು ಹಾಗೂ ಆಂತರಿಕ ಲೆಕ್ಕಪರಿಶೋಧಕರು, ಸಂಸ್ಥೆಯ ಮೇಲೆ ಯಾವುದೇ ತನಿಖಾ ಸಂಸ್ಥೆಗಳ ದಾಳಿ ನಡೆದಿಲ್ಲ ಎಂದು ಖಚಿತಪಡಿಸಿದ್ದಾರೆ. ಕೇಂದ್ರ ಸಹಕಾರಿ ಸಂಘಗಳ ನಿಬಂಧಕರಿಂದ (CRCS) ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿ ಸಾಮಾನ್ಯ ವಿಚಾರಣಾ ನೋಟಿಸ್ ಮಾತ್ರ ಬಂದಿದ್ದು, ಅದಕ್ಕೆ ಸಂಸ್ಥೆಯ ವತಿಯಿಂದ ಈಗಾಗಲೇ ಸಮಗ್ರ ಮತ್ತು ಸೂಕ್ತ ದಾಖಲೆಗಳೊಂದಿಗೆ ಉತ್ತರ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಆತಂಕಪಡುವ ಅಗತ್ಯವಿಲ್ಲ ಎಂದು ಸಂಸ್ಥೆ ಮನವಿ ಮಾಡಿದೆ.

1,065 ಕೋಟಿ ರೂ. ಹೂಡಿಕೆ:

ಇನ್ನು 1,065 ಕೋಟಿ ರೂಪಾಯಿ ಹೂಡಿಕೆಯ ಕುರಿತು ಕೇಳಿಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿ, “ಈ ಮೊತ್ತವನ್ನು ಸೊಸೈಟಿಯದ್ದೇ ಆಸ್ತಿಯಾಗಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯಲ್ಲಿ ಹೂಡಿಕೆ ಮಾಡಲಾಗಿದೆ. ಸಂಸ್ಥೆಯ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದು ಮನವಿ ಮಾಡಿದೆ.

 

 


Share this with Friends

Related Post