ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕಳೆದ ಐದು ದಶಕಗಳಿಂದ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ನಿಸ್ವಾರ್ಥ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಡಾ. ಬಿ. ರಮಣರಾವ್ ಅವರ ಕಾರ್ಯ ಇಡೀ ವೈದ್ಯಕೀಯ ಲೋಕಕ್ಕೆ ಮಾದರಿಯಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಶ್ಲಾಘಿಸಿದರು.
ತಾಲ್ಲೂಕಿನ ಟಿ. ಬೇಗೂರಿನಲ್ಲಿರುವ ಡಾ. ರಮಣರಾವ್ ಅವರ ‘ಹಳ್ಳಿ ಕ್ಲಿನಿಕ್’ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1972ರಿಂದಲೂ ನಿರಂತರವಾಗಿ 2,777 ಭಾನುವಾರಗಳಂದು ಸುಮಾರು 33 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇವರ ಈ ಅಪರೂಪದ ಸೇವೆಯನ್ನು ಗುರುತಿಸಿ 2010ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಗಿನ್ನಿಸ್ ವಿಶ್ವ ದಾಖಲೆಯ ಗೌರವ ಲಭಿಸಿರುವುದು ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ವೈದ್ಯಕೀಯ ವೃತ್ತಿಯ ವಾಣಿಜ್ಯೀಕರಣಕ್ಕೆ ಕಳವಳ:
ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯು ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿದ್ದು, ಹಣ ನೀಡಿದರೆ ಮಾತ್ರ ಚಿಕಿತ್ಸೆ ಎಂಬ ವಾತಾವರಣ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ವೈದ್ಯಕೀಯ ಪದವಿ ಪಡೆಯುವಾಗ ಪ್ರಾಮಾಣಿಕ ಸೇವೆಯ ಪ್ರಮಾಣ ಮಾಡುವ ವೈದ್ಯರು, ಡಾ. ರಮಣರಾವ್ ಅವರ ನಿಸ್ವಾರ್ಥ ಗುಣವನ್ನು ಅಳವಡಿಸಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು 6,000 ಆರೋಗ್ಯ ಕೇಂದ್ರಗಳಿದ್ದು, ಪ್ರತಿಯೊಬ್ಬ ವೈದ್ಯರೂ ಇಂತಹ ಸೇವಾ ಮನೋಭಾವ ಬೆಳೆಸಿಕೊಂಡರೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ನಾನೂ ರಮಣರಾವ್ ಅವರ ರೋಗಿ:
ತಾವೂ ಸಹ ಡಾ. ರಮಣರಾವ್ ಅವರ ಬಳಿಯೇ ಚಿಕಿತ್ಸೆ ಪಡೆಯುವುದಾಗಿ ಸ್ಮರಿಸಿದ ಪರಮೇಶ್ವರ್, ರೋಗಿಗಳನ್ನು ಪ್ರೀತಿ ಮತ್ತು ಆತ್ಮೀಯತೆಯಿಂದ ಕಾಣುವ ಅವರ ಮಾನವೀಯ ಗುಣ ಅನುಕರಣೀಯ ಎಂದರು. ದೇವರು ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗಿನ್ನಿಸ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್, ಡಾ. ಬಿ. ರಮಣರಾವ್, ಹೇಮಾ ರಮಣರಾವ್, ಡಾ. ಶರೀತ್ ಭೋಗರಾಜ್, ಡಾ. ಶಾಂತಿನಿ, ಡಾ. ಅಭಿಜಿತ್ ಭೋಗರಾಜ್, ಡಾ. ಜಾಹ್ನವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

