Mon. Nov 16th, 2026

ಕೋಮಾ ಸ್ಥಿತಿಯಲ್ಲಿರುವ ಮಗು ಶಯಾನ್ ಬೇರೆಡೆ ಸ್ಥಳಾಂತರಿಸಿದರೂ ಸಂಪೂರ್ಣ ಚಿಕಿತ್ಸಾ ವೆಚ್ಚ ಕ್ಲೌಡ್‌ನೈನ್ ಆಸ್ಪತ್ರೆಯೇ ಭರಿಸಬೇಕು:ಖಾದರ್ ಸೂಚನೆ

Share this with Friends

ಬೆಂಗಳೂರು: ಶಸ್ತ್ರಚಿಕಿತ್ಸೆಯ ಬಳಿಕ ಕೋಮಾ ಸ್ಥಿತಿಗೆ ತಲುಪಿರುವ ಪುಟ್ಟ ಮಗು ಶಯಾನ್‌ನ ಆರೋಗ್ಯ ಸ್ಥಿತಿಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸೋಮವಾರ ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಗು ಕಣ್ಣು ತೆರೆದಿರುವುದನ್ನು ಗಮನಿಸಿದ ಸಚಿವರು, ಮಗುವಿನ ಸದ್ಯದ ಆರೋಗ್ಯ ಹಾಗೂ ಮುಂದಿನ ಚಿಕಿತ್ಸಾ ಕ್ರಮಗಳ ಕುರಿತು ವೈದ್ಯರಿಂದ ಸಮಗ್ರ ಮಾಹಿತಿ ಪಡೆದುಕೊಂಡರು.

ಬಳಿಕ ಮಗುವಿನ ಪೋಷಕರು, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ತಜ್ಞ ವೈದ್ಯರೊಂದಿಗೆ ಜಂಟಿ ಸಭೆ ನಡೆಸಿದ ಸಚಿವರು, ಮಗುವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಸಚಿವರು ನೀಡಿದ ಪ್ರಮುಖ ನಿರ್ದೇಶನಗಳು:

ಮಗುವಿನ ಸಂಪೂರ್ಣ ವೈದ್ಯಕೀಯ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಸದ್ಯದ ಸ್ಥಿತಿ ಮತ್ತು ಮುಂದಿನ ಚಿಕಿತ್ಸೆಯ ಸಾಧ್ಯತೆಗಳ ಬಗ್ಗೆ ಪೋಷಕರಿಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕು.

ಇದಕ್ಕಿಂತ ಉನ್ನತ ಮಟ್ಟದ ಚಿಕಿತ್ಸೆ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಅಥವಾ ತಜ್ಞ ವೈದ್ಯರಿಂದ ಲಭ್ಯವಿದ್ದರೆ, ಮಗುವನ್ನು ಅಲ್ಲಿಗೆ ಸ್ಥಳಾಂತರಿಸಲು ಅವಕಾಶ ಕಲ್ಪಿಸಬೇಕು.

ಮಗುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಸಹ, ಅದರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕ್ಲೌಡ್‌ನೈನ್ ಆಸ್ಪತ್ರೆಯೇ ಭರಿಸಬೇಕು ಎಂದರು‌

ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಪೋಷಕರು ತಮ್ಮ ಕುಟುಂಬಸ್ಥರು ಹಾಗೂ ವೈದ್ಯರೊಂದಿಗೆ ಸಮಾಲೋಚಿಸಿ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕೆಎಂಸಿ (KMC) ತನಿಖೆಗೆ ಪ್ರಕರಣ:

ಈ ಹಿಂದೆಯೇ ಮಗುವಿನ ಕುಟುಂಬಸ್ಥರು ಭೇಟಿಯಾಗಿ ಅಳಲು ತೋಡಿಕೊಂಡಾಗ, ಸಂಪೂರ್ಣ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಕೆಪಿಎಂಇ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರಾದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಕ್ಟೋಬರ್ 8ರಂದು ಆದೇಶ ಹೊರಡಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು ಅಕ್ಟೋಬರ್ 12ರಂದು ಆಸ್ಪತ್ರೆಗೆ ಪತ್ರ ರವಾನಿಸಿದ್ದರು. ಮಗುವಿನ ತಂದೆ ನೀಡಿದ ದೂರಿನನ್ವಯ ತಜ್ಞ ವೈದ್ಯರ ತಂಡ ವಿಚಾರಣೆ ನಡೆಸಿದ್ದು, ಜಿಲ್ಲಾಧಿಕಾರಿಗಳು ಎರಡೂ ಕಡೆಯವರ ವಾದ ಆಲಿಸಿ ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (KMC) ತನಿಖೆಗೆ ಒಪ್ಪಿಸಿದ್ದಾರೆ. ಪರಿಷತ್‌ನ ತನಿಖಾ ವರದಿ ಕೈಸೇರಿದ ತಕ್ಷಣ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಾದರ್ ಸ್ಪಷ್ಟಪಡಿಸಿದರು.

ಸಾರ್ವಜನಿಕರಿಗೆ ಸಚಿವರ ಮನವಿ:

ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ತೊಂದರೆಯಾದರೆ ಸಾರ್ವಜನಿಕರು ತಕ್ಷಣವೇ ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ಸಲ್ಲಿಸಬೇಕು ಮತ್ತು ಅದರ ಪ್ರತಿಯನ್ನು ಸರ್ಕಾರಕ್ಕೂ ನೀಡಬೇಕು. ಸರ್ಕಾರ ಸದಾ ಜನರ ನೆರವಿಗೆ ನಿಲ್ಲಲಿದೆ ಎಂದ ಸಚಿವರು, ಪುಟ್ಟ ಶಯಾನ್ ಶೀಘ್ರ ಗುಣಮುಖನಾಗಲಿ ಎಂದು ಹಾರೈಸಿದರು.

 


Share this with Friends

Related Post