ಬೆಂಗಳೂರು/ನವದೆಹಲಿ: ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರು ಹಾಗೂ ನೀರಾವರಿಗೆ ತೀವ್ರ ಅಭಾವ ಎದುರಾಗಿದ್ದು, ರಾಜ್ಯದ ಹಿತರಕ್ಷಣೆಗೆ ತಕ್ಷಣವೇ ಮಧ್ಯಪ್ರವೇಶಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 6 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ:
ಪ್ರಸಕ್ತ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಶೇ. 35ರಿಂದ 40ರಷ್ಟು ಮಳೆ ಕೊರತೆಯಾಗಿದ್ದು, ಜಲಾಶಯಗಳು ಶೇ. 50-55ರಷ್ಟೂ ಭರ್ತಿಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಬಿಡುವಂತೆ ಕರ್ನಾಟಕಕ್ಕೆ ಪದೇಪದೇ ನಿರ್ದೇಶನ ನೀಡುತ್ತಿದೆ. ತಮಿಳುನಾಡಿಗೆ ನೀರಾವರಿಗಾಗಿ ನೀರು ಬೇಕಿದ್ದರೆ, ಕರ್ನಾಟಕಕ್ಕೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವಿದೆ. ರಾಷ್ಟ್ರೀಯ ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಾ ಹೋದರೆ ಬೇಸಿಗೆಗೂ ಮುನ್ನವೇ ರಾಜ್ಯದ ಜಲಾಶಯಗಳು ಸಂಪೂರ್ಣ ಬರಿದಾಗಲಿವೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಡಿಪಿಆರ್ಗೆ ಶೀಘ್ರ ಅನುಮತಿ ನೀಡಿ:
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರೂಪಿಸಲಾಗಿರುವ ‘ಮೇಕೆದಾಟು ಕುಡಿಯುವ ನೀರಿನ ಯೋಜನೆ’ಯ ಪರಿಷ್ಕೃತ ಡಿಪಿಆರ್ (DPR) ಅನ್ನು ರಾಜ್ಯ ಸರ್ಕಾರವು 2026ರ ಆಗಸ್ಟ್ 13ರಂದು ಕೇಂದ್ರ ಜಲ ಆಯೋಗಕ್ಕೆ (CWC) ಮರುಸಲ್ಲಿಕೆ ಮಾಡಿದೆ. ಬೆಂಗಳೂರಿನ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ ಈ ಯೋಜನೆಗೆ ಆದ್ಯತೆಯ ಮೇರೆಗೆ ತಕ್ಷಣ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನದಿ ಜೋಡಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಸರಿಪಡಿಸಿ:
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಕೈಗೆತ್ತಿಕೊಂಡಿರುವ ‘ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ’ ಯೋಜನೆಯಲ್ಲಿ ಒಟ್ಟು 147.7 ಟಿಎಂಸಿ ನೀರಿನ ಪೈಕಿ ತೆಲಂಗಾಣಕ್ಕೆ 45, ಆಂಧ್ರಪ್ರದೇಶಕ್ಕೆ 43.8, ತಮಿಳುನಾಡಿಗೆ 40.9 ಹಾಗೂ ಪುದುಚೇರಿಗೆ 2.1 ಟಿಎಂಸಿ ಹಂಚಿಕೆ ಮಾಡಲಾಗಿದೆ. ಆದರೆ ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ನೀರು ಮಾತ್ರ ನಿಗದಿಪಡಿಸಲಾಗಿದೆ. ಇದು ರಾಜ್ಯಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದ್ದು, ಸಮಾನತೆ ಮತ್ತು ನ್ಯಾಯದ ಆಧಾರದ ಮೇಲೆ ಕರ್ನಾಟಕದ ಪಾಲನ್ನು ಇತರ ರಾಜ್ಯಗಳಿಗೆ ಸರಿಸಮನಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ಮುಂದೆ ದೇವೇಗೌಡರು ಇಟ್ಟಿರುವ 4 ಪ್ರಮುಖ ಬೇಡಿಕೆಗಳು:
ಪ್ರಾಧಿಕಾರದ ಅಧಿಕಾರ ಮಿತಿಗೊಳಿಸುವುದು: 2025ರ ನವೆಂಬರ್ 13ರ ಸುಪ್ರೀಂ ಕೋರ್ಟ್ ಆದೇಶದಂತೆ, ತನಗೆ ಹಂಚಿಕೆಯಾದ ನೀರನ್ನು ಬಳಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಕರ್ನಾಟಕಕ್ಕಿದೆ. ಆದ್ದರಿಂದ CWMA ಅಧಿಕಾರವನ್ನು ಕೇವಲ ತಮಿಳುನಾಡಿಗೆ ಬಿಡುವ ನೀರಿನ ಮೇಲ್ವಿಚಾರಣೆಗೆ ಮಾತ್ರ ಸೀಮಿತಗೊಳಿಸಬೇಕು.
ನ್ಯಾಯಾಧೀಕರಣದ ತೀರ್ಪು ಮರುಪರಿಶೀಲನೆ: 50 ವರ್ಷಗಳ ಹಳೆಯ ದತ್ತಾಂಶ ಆಧರಿಸಿ ನೀಡಲಾದ ಕಾವೇರಿ ನ್ಯಾಯಾಧೀಕರಣದ ತೀರ್ಪು ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ. ಮೇಕೆದಾಟು ವಿಚಾರವಾಗಿ ತಮಿಳುನಾಡಿನ ದೂರಿನನ್ವಯ ಹೊಸ ನ್ಯಾಯಾಧೀಕರಣ ರಚಿಸುವುದಾದರೆ, ತೀರ್ಪು ಮರುಪರಿಶೀಲನೆಯ ವಿಷಯವನ್ನೂ ಅದಕ್ಕೆ ಒಪ್ಪಿಸಬೇಕು.
ಮೇಕೆದಾಟು ಅನುಮೋದನೆ: ಮೇಕೆದಾಟು ಯೋಜನೆಯ ಡಿಪಿಆರ್ಗೆ ಕೇಂದ್ರ ಜಲ ಆಯೋಗದಿಂದ ತುರ್ತಾಗಿ ಅನುಮತಿ ಕೊಡಿಸಬೇಕು.
ನದಿ ಜೋಡಣೆ ಅಂತಿಮಗೊಳಿಸುವಿಕೆ: ಕರ್ನಾಟಕಕ್ಕೆ ಹೆಚ್ಚಿನ ನೀರಿನ ಪಾಲು ಹಂಚಿಕೆ ಮಾಡಿ, ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆಯೊಂದಿಗೆ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಡಿಪಿಆರ್ ಅನ್ನು ಶೀಘ್ರ ಅಂತಿಮಗೊಳಿಸಬೇಕು.

