Mon. Nov 16th, 2026

ಹಾಸನದಲ್ಲಿ ಹೆಚ್ಚಿದ ಆನೆ-ಮಾನವ ಸಂಘರ್ಷ: 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಮಹತ್ವದ ಆದೇಶ

Share this with Friends

ಬೆಂಗಳೂರು/ಹಾಸನ: ಹಾಸನ ಅರಣ್ಯ ವಿಭಾಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅಧಿಕೃತ ಅನುಮತಿ ನೀಡಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಸೋಮವಾರ (ನ. 16) ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದಾರೆ.

ಎರಡು ದಿನಗಳಲ್ಲಿ ಇಬ್ಬರು ಸಾವು:

ಹಾಸನ ವಿಭಾಗದ ವ್ಯಾಪ್ತಿಯಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ನವೆಂಬರ್ 15ರಂದು ಬೇಲೂರು ತಾಲ್ಲೂಕಿನ ಚೌಡನಹಳ್ಳಿಯಲ್ಲಿ ಜಯಮ್ಮ (ಅಂದಾಜು 50 ವರ್ಷ) ಹಾಗೂ ನವೆಂಬರ್ 16ರಂದು ಹಫೀಜ್ ಉರ್ ರೆಹಮಾನ್ (ಅಂದಾಜು 64 ವರ್ಷ) ಎಂಬುವವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ 10 ಗಂಡು ಕಾಡಾನೆಗಳು ನಿರಂತರ ಉಪಟಳ ನೀಡುತ್ತಿರುವ ಕುರಿತು ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿ ಸಲ್ಲಿಸಿದ್ದರು.

‘ಟೀಮ್ ಎ’ ಮತ್ತು ‘ಟೀಮ್ ಸಿ’ ಕುಮ್ಕಿ ಆನೆಗಳ ಬಳಕೆ:

ಈ ಹಿಂದೆ ಕೇವಲ ಎರಡು ಆನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಲಾಗಿತ್ತು. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ವನ್ಯಜೀವಿ (ರಕ್ಷಣಾ) ಕಾಯ್ದೆ 1972ರ ಸೆಕ್ಷನ್ 11(1)(ಎ) ಅಡಿಯಲ್ಲಿ ಒಟ್ಟು 10 ಗಂಡು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಲು ಆದೇಶಿಸಲಾಗಿದೆ. ಸೆರೆಹಿಡಿದ ಆನೆಗಳ ಆರೋಗ್ಯ ಸ್ಥಿತಿಗತಿಗೆ ಅನುಗುಣವಾಗಿ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ಈ ಬೃಹತ್ ಕಾರ್ಯಾಚರಣೆಗಾಗಿ ಪುನರ್‌ರಚಿಸಲಾಗಿರುವ ಕುಮ್ಕಿ ಸಾಕಾನೆಗಳ ‘ತಂಡ ಎ’ ಮತ್ತು ‘ತಂಡ ಸಿ’ (Team A & C) ಆನೆಗಳನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಸಾಕಾನೆ ಶಿಬಿರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತುರ್ತಾಗಿ ಕುಮ್ಕಿ ಆನೆಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಾರ್ಯಾಚರಣೆ ವೇಳೆ ಪ್ರಮಾಣಿತ ಕಾರ್ಯವಿಧಾನಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಮುಂಜಾಗ್ರತೆ ವಹಿಸಿ, ಕಾರ್ಯಾಚರಣೆ ಬಳಿಕ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

 

 


Share this with Friends

Related Post