Thu. Nov 19th, 2026

ಕೊಯ್ಲೋತ್ತರ ಆಹಾರ ನಷ್ಟಕ್ಕೆ ಬ್ರೇಕ್: ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ ರಡಿ 7 ನವೀನ ಕೃಷಿ ತಂತ್ರಜ್ಞಾನಗಳ ಆಯ್ಕೆ

Share this with Friends

ಬೆಂಗಳೂರು: ತೋಟಗಾರಿಕಾ ಬೆಳೆಗಳ ಕಟಾವಿನ ನಂತರ ಉಂಟಾಗುವ ಭಾರೀ ಆಹಾರ ನಷ್ಟವನ್ನು ತಪ್ಪಿಸಲು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ ಸ್ಪರ್ಧೆಯಲ್ಲಿ ಅಂತಿಮವಾಗಿ ಏಳು ನವೀನ ಕೃಷಿ-ತಂತ್ರಜ್ಞಾನ ಪರಿಹಾರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್ 2026’ ರ ಸಮಾರೋಪ ಸಮಾರಂಭದಲ್ಲಿ ಈ ವಿಜೇತ ತಂತ್ರಜ್ಞಾನಗಳನ್ನು ಪ್ರಕಟಿಸಲಾಯಿತು.

ವಾರ್ಷಿಕ 22,000 ಕೋಟಿ ರೂ. ಉತ್ಪನ್ನಗಳ ರಕ್ಷಣೆ ಗುರಿ:

ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮಾವು, ಬಾಳೆ, ಟೊಮೆಟೊ, ದ್ರಾಕ್ಷಿ, ದಾಳಿಂಬೆ ಮತ್ತು ಅನಾನಸ್‌ಗಳ ವಾರ್ಷಿಕ ಉತ್ಪಾದನಾ ಮೌಲ್ಯ ಸುಮಾರು 22,000 ಕೋಟಿ ರೂ.ಗಳಷ್ಟಿದೆ. ಆದರೆ, ಸಮರ್ಪಕ ಶೀತಲ ಸಂಗ್ರಹಣೆ, ಪ್ಯಾಕೇಜಿಂಗ್ ಹಾಗೂ ಸಾಗಣೆ ವ್ಯವಸ್ಥೆಯ ಕೊರತೆಯಿಂದಾಗಿ ಶೇ.10 ರಿಂದ 15ರಷ್ಟು ಬೆಳೆಗಳು ಹಾಳಾಗುತ್ತಿವೆ. ಮುಖ್ಯಮಂತ್ರಿಗಳ ‘ಬಿಯಾಂಡ್ ಬೆಂಗಳೂರು’ ಕರೆಗೆ ಪೂರಕವಾಗಿ ಈ ನಷ್ಟವನ್ನು ತಡೆಗಟ್ಟಲು ದೇಶಾದ್ಯಂತ ಬಂದಿದ್ದ 210 ಅರ್ಜಿಗಳನ್ನು ಪರಿಶೀಲಿಸಿ, ತಜ್ಞರ ಸಮಿತಿಯು ಈ 7 ಪರಿಹಾರಗಳನ್ನು ಅಂತಿಮಗೊಳಿಸಿದೆ.

“ಆಹಾರ ನಷ್ಟ ತಡೆಯಲು ಸರ್ಕಾರ, ರೈತ ಸಂಸ್ಥೆಗಳು, ಸಂಶೋಧಕರು ಮತ್ತು ಹೂಡಿಕೆದಾರರ ಒಗ್ಗಟ್ಟಿನ ಪ್ರಯತ್ನ ಅಗತ್ಯವಿದೆ. ಈ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ರೈತರ ಜಮೀನುಗಳಿಗೆ ತಲುಪಿಸುವುದೇ ನಮ್ಮ ನಿಜವಾದ ಯಶಸ್ಸು,” ಎಂದು ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.

ಆಯ್ಕೆಯಾದ 7 ನವೀನ ಪರಿಹಾರಗಳು:

ಅಚ್ಯುತ ಇನ್ನೋವೇಶನ್ಸ್: ಹಣ್ಣು-ತರಕಾರಿಗಳು ಬೇಗನೆ ಕೊಳೆಯದಂತೆ ಅವುಗಳ ದೃಢತೆ ಮತ್ತು ಬಾಳಿಕೆಯ ಅವಧಿಯನ್ನು ಹೆಚ್ಚಿಸುವ ಕೊಯ್ಲು ಪೂರ್ವ ತಂತ್ರಜ್ಞಾನ (‘ರೈಪ್ ಅಂಡ್ ಸ್ಟೇ ಫಿಟ್’).

ದ್ವಾರಾ ಇ-ರಿಜಿಸ್ಟ್ರಿ: ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಸುಲಭವಾಗಿ ಬ್ಯಾಂಕ್ ಸಾಲ ಸಿಗುವಂತೆ ಮಾಡುವ ‘ಖೇತ್‌ಸ್ಕೋರ್’ ಸಾಲ ಮೌಲ್ಯಮಾಪನ ವ್ಯವಸ್ಥೆ.

ಇಕೋ365: ತಾಜಾ ಕೃಷಿ ಉತ್ಪನ್ನಗಳ ಬಾಳಿಕೆ ಹೆಚ್ಚಿಸಲು ಮಣ್ಣಿನಲ್ಲಿ ಜೈವಿಕವಾಗಿ ಕರಗುವ ಬೆಳೆ ಆಧಾರಿತ ಪ್ಯಾಕೇಜಿಂಗ್ ವ್ಯವಸ್ಥೆ (‘ಫ್ರೆಕ್ಸಾ’).

ಕಾಶಿಕರಿ ಟೆಕ್ಸ್‌ಟೈಲ್ಸ್: ಕೃಷಿ ತ್ಯಾಜ್ಯವಾದ ಅನಾನಸ್ ಎಲೆಗಳಿಂದ ನಾರು ತೆಗೆದು ಜವಳಿ ಉತ್ಪನ್ನಗಳನ್ನು ತಯಾರಿಸುವ ವಿನೂತನ ತಂತ್ರಜ್ಞಾನ.

ರೂಟ್ಸ್‌ಗೂಡ್ಸ್: ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಡಿಜಿಟಲ್ ಮೂಲಕ ಪರೀಕ್ಷಿಸಿ, ಸುಗಮ ಸಂಗ್ರಹಣೆ ಮತ್ತು ವ್ಯಾಪಾರಕ್ಕೆ ನೆರವಾಗುವ ವೇದಿಕೆ.

ರುಕಾರ್ಟ್ ಟೆಕ್ನಾಲಜೀಸ್: ಹಳ್ಳಿಗಳು ಮತ್ತು ಮಾರುಕಟ್ಟೆಗಳಿಗೆ ಸೂಕ್ತವಾದ ಕಡಿಮೆ ವಿದ್ಯುತ್ ಬಳಕೆಯ ಶೀತಲೀಕರಣ (‘ಸಬ್ಜಿ ಕೂಲರ್’) ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವ ಪರಿಹಾರ.

ಎಕ್ಸಿಂಪಲ್ ಟೆಕ್ನಾಲಜೀಸ್: ಕೃಷಿ ಉತ್ಪನ್ನಗಳ ರಫ್ತು ಸಾಗಣೆ, ನಿಯಮಾನುಸರಣೆ ಮತ್ತು ವ್ಯಾಪಾರ ಹಣಕಾಸು ನಿರ್ವಹಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ವೇದಿಕೆ.

ವಿಜೇತ ಪರಿಹಾರಗಳು ರೈತರಿಗೆ ಕೈಗೆಟುಕುವ ದರದಲ್ಲಿ ಸಿಕ್ಕರೆ ಮತ್ತು ಸ್ಥಳೀಯ ಬೆಳೆಗಳಿಗೆ ಹೊಂದಿಕೊಂಡರೆ ಮಾತ್ರ ಈ ಯೋಜನೆ ಯಶಸ್ವಿಯಾಗಲಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಶ್ರೀ ಗಿರೀಶ್ (ಐಎಎಸ್) ತಿಳಿಸಿದ್ದಾರೆ. ಆಹಾರ ನಷ್ಟ ತಡೆಯುವುದರಿಂದ ರೈತರ ಆದಾಯದ ಜೊತೆಗೆ ಜನರಿಗೆ ಪೌಷ್ಟಿಕ ಆಹಾರವೂ ಲಭ್ಯವಾಗಲಿದೆ ಎಂದು ‘ಗೇನ್’ (GAIN) ಸಂಸ್ಥೆಯ ಕಂಟ್ರಿ ಡೈರೆಕ್ಟರ್ ಭುವನೇಶ್ವರಿ ಬಾಲಸುಬ್ರಮಣಿಯನ್ ಹಾಗೂ ಥಿಂಕ್‌ಥ್ರೂ ಕನ್ಸಲ್ಟಿಂಗ್ ಸಂಸ್ಥಾಪಕಿ ಡಾ. ಪಾರುಲ್ ಸೋನಿ ಅಭಿಪ್ರಾಯಪಟ್ಟಿದ್ದಾರೆ.

ತೋಟಗಾರಿಕೆ ಇಲಾಖೆಯ ಆತಿಥ್ಯದಲ್ಲಿ GAIN, ನ್ಯೂಟ್ರಿಷನ್ ಕನೆಕ್ಟ್, ಥಿಂಕ್‌ಥ್ರೂ ಕನ್ಸಲ್ಟಿಂಗ್ ಮತ್ತು ABWCI ಸಂಸ್ಥೆಗಳು ಜಂಟಿಯಾಗಿ ಈ ವೇದಿಕೆಯನ್ನು ರೂಪಿಸಿದ್ದು, ಮುಂದಿನ ಹಂತದಲ್ಲಿ ಈ ತಂತ್ರಜ್ಞಾನಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

 


Share this with Friends

Related Post