ಬೆಂಗಳೂರು: ಬಸವಣ್ಣನವರ ತತ್ವ ಮತ್ತು ವಿಚಾರಗಳಿಗೆ ಅಪಚಾರ ಮಾಡುವ ಹಾಗೂ ಸಂಶೋಧನೆಯ ಹೆಸರಿನಲ್ಲಿ ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡುವಂತಿರುವ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯನ್ನು ರಾಜ್ಯ ಸರ್ಕಾರ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಬಸವ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಮಾಜದ ಶಾಂತಿ ಕದಡುತ್ತಿರುವ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬಸವ ಸಮಿತಿ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಷಡ್ಯಂತ್ರದ ಆರೋಪ ಹಾಗೂ ಕ್ಷಮೆಯಾಚನೆ ತಿರಸ್ಕಾರ:
“ಸಮಾನತೆ ಮತ್ತು ಜಾತಿರಹಿತ ಸಮಾಜದ ಪರಿಕಲ್ಪನೆ ನೀಡಿದ ಬಸವಣ್ಣನವರನ್ನು ಈ ಕೃತಿಯಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಇದರ ಹಿಂದೆ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ಕೈವಾಡವೂ ಇದೆ. ವಿರೋಧ ವ್ಯಕ್ತವಾದ ಬಳಿಕ ಲೇಖಕರು ಕ್ಷಮೆ ಮತ್ತು ತಿದ್ದುಪಡಿಯ ನಾಟಕವಾಡುತ್ತಿದ್ದಾರೆ. ಆದರೆ, ನಮಗೆ ಯಾವುದೇ ಕ್ಷಮೆ ಬೇಕಿಲ್ಲ; ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲೇಬೇಕು,” ಎಂದು ಜತ್ತಿ ಪ್ರತಿಪಾದಿಸಿದರು. ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಬಳಿಕ ಇಂತಹ ವಿಕೃತ ಬೆಳವಣಿಗೆಗಳು ಹೆಚ್ಚಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಳಂದ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, “ಬಸವಣ್ಣ, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಸಹಿಸದ ಮನಸ್ಥಿತಿ ಮೊದಲಿನಿಂದಲೂ ಇದೆ. ಜಗತ್ತಿನ 143 ಭಾಷೆಗಳಿಗೆ ಬಸವಣ್ಣನವರ ವಚನಗಳು ಅನುವಾದಗೊಂಡಿವೆ. ಇಂತಹ ಮಹಾನ್ ಚೇತನಕ್ಕೆ ಮಸಿ ಬಳಿಯುವ ಕೆಲಸ ನಿಲ್ಲದಿದ್ದರೆ ಬೀದಿಗಿಳಿದು ಹೋರಾಡುವುದು ಅನಿವಾರ್ಯ,” ಎಂದರು.
ಕಾನೂನು ಕ್ರಮಕ್ಕೆ ಸಿಎಂ ಜೊತೆ ಚರ್ಚೆ; ಬೀದಿಗಿಳಿದು ಉಗ್ರ ಹೋರಾಟ: ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ
ಇದೇ ವೇಳೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, “ಬಸವಣ್ಣ ಮತ್ತು ಲಿಂಗಾಯತ ಸಮುದಾಯದ ಮೇಲಿನ ಈ ದಾಳಿಯನ್ನು ಇನ್ನು ಮುಂದೆ ಎಳ್ಳಷ್ಟೂ ಸಹಿಸುವುದಿಲ್ಲ. ಈಗಾಗಲೇ ರಾಜ್ಯದ ವಿವಿಧೆಡೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲೂ ಪ್ರತಿಭಟನೆಗಳು ಆರಂಭವಾಗಿವೆ. ಈ ಕುರಿತು ನಾನು ಮತ್ತು ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಇತರ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ,” ಎಂದು ಎಚ್ಚರಿಸಿದರು.
ಬಿದರಿ, ಮನು ಬಳಿಗಾರ್ ವಿರುದ್ಧ ಆಕ್ರೋಶ:
“ಅಂತಹ ಕೃತಿಯ ಬಿಡುಗಡೆ ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್ ಹೋಗಿರುವುದು ಖಂಡನೀಯ. ಇವರಿಬ್ಬರೂ 21ನೇ ಶತಮಾನದ ಕೊಂಡಿ ಮಂಚಣ್ಣರಂತೆ ವರ್ತಿಸಿದ್ದಾರೆ. ಬಿದರಿ ವಿರುದ್ಧ ಕ್ರಮ ಕೈಗೊಳ್ಳುವುದು ಮಹಾಸಭಾಗೆ ಬಿಟ್ಟ ವಿಚಾರ,” ಎಂದು ಪಾಟೀಲ್ ಕಿಡಿಕಾರಿದರು. ಸಿರಿಗೆರೆ, ಭಾಲ್ಕಿ, ಗದಗ, ಸುತ್ತೂರು ಸೇರಿದಂತೆ ನಾಡಿನ ಎಲ್ಲಾ ಮಠಾಧೀಶರು ಇದರ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದ ಅವರು, ಸಮುದಾಯದ ಅಸ್ಮಿತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಚಿಂತಕ ಜೆ.ಎಸ್. ಪಾಟೀಲ್, ಬ್ರಿಟನ್ ಕನ್ನಡಿಗ ನೀರಜ್ ಪಾಟೀಲ್, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

