Thu. Nov 19th, 2026

‘ಒಟಿಟಿಯಲ್ಲಿ ಸಿನಿಮಾವಿದ್ದರೂ ಥಿಯೇಟರ್‌ಗೆ ಹೋಗಿ ನೋಡಿದೆ’: ನಿರ್ದೇಶಕ ಮನೋಜ್ ಸಿನಿಮಾಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಮೆಚ್ಚುಗೆ

Share this with Friends

ಬೆಂಗಳೂರು: ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ಸಿನಿಮಾ ಲಭ್ಯವಿದ್ದರೂ, ತಮ್ಮ ಶಿಷ್ಯರೊಂದಿಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿರುವ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರತಂಡದ ಶ್ರಮಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಮನೋಜ್ ಅವರಿಗೆ ವಿಶೇಷ ಪತ್ರ ಬರೆದಿರುವ ನಾಗತಿಹಳ್ಳಿ, “ಸಿನಿಮಾ ಬಿಡುಗಡೆಯ ಆರಂಭದ ಗದ್ದಲ-ಗೌಜು ಮುಗಿಯಲಿ ಎಂದು ಕಾದಿದ್ದೆ. ನಿನ್ನೆ ವೆಗಾಸಿಟಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬಂದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಿನಿಮಾಗಳನ್ನು ವಿಶಾಲ ಪರದೆಯ ಮೇಲೆ ಹಣ ಕೊಟ್ಟು ಆಸ್ವಾದಿಸಬೇಕೆಂಬುದು ನನ್ನ ನಂಬಿಕೆ,” ಎಂದು ತಿಳಿಸಿದ್ದಾರೆ.

ಹೊಸಬರ ಸಾಹಸ ಮತ್ತು ನಟನೆಗೆ ಪ್ರಶಂಸೆ:

“ಗುಣಕ್ಕೆ ಎಂದಿಗೂ ಮತ್ಸರ ಸಲ್ಲ. ಸ್ವಯಾರ್ಜಿತ ಸೃಜನಶೀಲ ಗುಣ ಮತ್ತು ಅದೃಷ್ಟಮೂಲದಿಂದ ಬರುವ ಯಶಸ್ಸು ಎರಡೂ ಅಭಿನಂದನೆಗೆ ಅರ್ಹ. ಹೊಸಬರೊಂದಿಗೆ ಸಿನಿಮಾ ಮಾಡುವುದು ನನಗೂ ಇಷ್ಟವಾದ ಸಾಹಸ. ಚಿತ್ರದ ಮೂವರೂ ಕಲಾವಿದರು ಬಹಳ ಶ್ರದ್ಧೆಯಿಂದ ನಟಿಸಿದ್ದಾರೆ. ನನ್ನೊಂದಿಗೆ ಮೂರು ಚಿತ್ರಗಳಲ್ಲಿ ಕೆಲಸ ಮಾಡಿರುವ ರಘು ಅದ್ಭುತ ನಟ; ಕೊಂಚ ಅತಿಯಾಗಿ ನಟಿಸುತ್ತಾರೆ (Overact) ಎನ್ನುವುದನ್ನು ಬಿಟ್ಟರೆ ಆತ ಬೆಳ್ಳಿತೆರೆಯ ಬಂಗಾರ,” ಎಂದು ನಾಗತಿಹಳ್ಳಿ ಶ್ಲಾಘಿಸಿದ್ದಾರೆ.

ಗಂಡ ಹೆಂಡತಿಯ ಕಾಲಿಗೆ ಬೀಳುವ ದೃಶ್ಯಕ್ಕೆ ವಿಶೇಷ ಮೆಚ್ಚುಗೆ:

ಚಿತ್ರದ ಪ್ರಮುಖ ದೃಶ್ಯವೊಂದನ್ನು ಉಲ್ಲೇಖಿಸಿರುವ ಅವರು, “ನನಗೆ ಅತ್ಯಂತ ಮೆಚ್ಚುಗೆಯಾದ ದೃಶ್ಯ ಎಂದರೆ ಗಂಡ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವುದು. ಮನುಷ್ಯರು ಮಾಡುವ ಎಲ್ಲಾ ತಪ್ಪುಗಳಿಗೆ ಇದೇ ಪರಿಹಾರವಲ್ಲದಿದ್ದರೂ, ಇದು ನೀವು ಸ್ತ್ರೀತ್ವಕ್ಕೆ ಕೊಟ್ಟ ಸಂತೈಕೆ. ಒಂದು ಕಮರ್ಷಿಯಲ್ ಚಿತ್ರದಲ್ಲೂ ನಿರ್ದೇಶಕನಿಗಿರಬೇಕಾದ ಮೌಲ್ಯಪ್ರಜ್ಞೆಯನ್ನು ಇದು ತೋರಿಸುತ್ತದೆ. ಒಬ್ಬ ಜನಪ್ರಿಯ ಸ್ಟಾರ್ ನಟನಿದ್ದರೆ ಹೀಗೆ ಪತ್ನಿಯ ಕಾಲಿಗೆ ಬೀಳುತ್ತಿದ್ದರಾ ಅಥವಾ ಜನ ಒಪ್ಪುತ್ತಿದ್ದರಾ ಗೊತ್ತಿಲ್ಲ,” ಎಂದು ವಿಶ್ಲೇಷಿಸಿದ್ದಾರೆ.

“ಕನ್ನಡ ಚಿತ್ರರಂಗಕ್ಕೆ ಮತ್ತು ನಮಗೆಲ್ಲರಿಗೂ ಇಂತಹದೊಂದು ಗೆಲುವಿನ ಅಗತ್ಯವಿತ್ತು. ನಿಮ್ಮ ಈ ಗೆಲುವು ನಮ್ಮೆಲ್ಲರ ಗೆಲುವು,” ಎಂದು ನಾಗತಿಹಳ್ಳಿ ಚಂದ್ರಶೇಖರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

 

 


Share this with Friends

Related Post