ಬೆಂಗಳೂರು: ರಾಜ್ಯ ಸರ್ಕಾರದ ಆದೇಶದ ಮೇರೆಗೆ, 2026-27ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿ.ಎಡ್ (B.Ed) ಕೋರ್ಸ್ ಪ್ರವೇಶ ಪ್ರಕ್ರಿಯೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಬಿ.ಎಡ್ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 30, 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಡಿಸೆಂಬರ್ 2, 2026
ಪ್ರವೇಶ ಪರೀಕ್ಷೆ ಇಲ್ಲ, ಪದವಿ ಅಂಕಗಳೇ ಆಧಾರ:
ಬಿ.ಎಡ್ ಕೋರ್ಸ್ ಪ್ರವೇಶಕ್ಕಾಗಿ ಪ್ರತ್ಯೇಕವಾಗಿ ಯಾವುದೇ ಪ್ರವೇಶ ಪರೀಕ್ಷೆ (Entrance Exam) ನಡೆಸಲಾಗುವುದಿಲ್ಲ. ಬದಲಾಗಿ, ಅಭ್ಯರ್ಥಿಗಳು ಪದವಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕೆಇಎ ಅನುಸರಿಸುವ ಮಾನದಂಡಗಳನ್ನೇ ಬಿ.ಎಡ್ ಕೌನ್ಸೆಲಿಂಗ್ಗೂ ಅಳವಡಿಸಿಕೊಳ್ಳಲಾಗುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡಗಳು ಹಾಗೂ ಕೌನ್ಸೆಲಿಂಗ್ ಕುರಿತ ಸಂಪೂರ್ಣ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಮಾಹಿತಿ ಪುಸ್ತಕವನ್ನು ಪರಿಶೀಲಿಸುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

