ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ಕೈಬಿಡುವಂತೆ ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಕಳಕಳಿಯ ಮನವಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಮಗ್ರ ಮತ್ತು ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ನಡೆಸುತ್ತಿರುವುದು ತಮಗೆ ನೋವುಂಟು ಮಾಡಿದೆ. ಆಶಾ ಕಾರ್ಯಕರ್ತೆಯರ ನೋವು ಮತ್ತು ಸಂಕಷ್ಟ ತಮಗೆ ಅರ್ಥವಾಗುತ್ತದೆ. “ನೀವು ನನಗೆ ಕೇವಲ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ. ಒಬ್ಬ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ದಯವಿಟ್ಟು ಹೋರಾಟವನ್ನು ಕೈಬಿಡಿ” ಎಂದು ಮುಖ್ಯಮಂತ್ರಿಗಳು ಭಾವನಾತ್ಮಕವಾಗಿ ವಿನಂತಿಸಿದ್ದಾರೆ.
ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರಿಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆಯ ಅವಕಾಶ ಕಲ್ಪಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಅವರು ಸ್ಮರಿಸಿದ್ದಾರೆ. ಕಾರ್ಯಕರ್ತೆಯರ ಸೇವೆ, ಶ್ರಮ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದೊಂದಿಗೆ ಚರ್ಚಿಸಿ, ಬೇಡಿಕೆಗಳಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

