ಬೆಂಗಳೂರು: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಕೋಣನಕುಂಟೆ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸುಮಾರು 600 ಮೀಟರ್ ಉದ್ದದ ಸ್ಪ್ಲಿಟ್ ಮಾದರಿಯ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರನೇ ಹಂತದ ‘ವಾರ್ಡ್ ಒನ್ ಅಭಿಯಾನ’ಕ್ಕೆ ಕೋಣನಕುಂಟೆ ಕ್ರಾಸ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಭೂಸ್ವಾಧೀನವೂ ಸೇರಿದಂತೆ ಈ ಮೇಲ್ಸೇತುವೆ ಯೋಜನೆಗೆ ಅಂದಾಜು 77 ಕೋಟಿ ವೆಚ್ಚವಾಗಲಿದೆ. ಕಾಮಗಾರಿಯನ್ನು ಶೀಘ್ರವೇ ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಸ್ಕೈವಾಕ್ ಹಾಗೂ ತಾತ್ಕಾಲಿಕ ಕ್ರಮಗಳು:
ಕೋಣನಕುಂಟೆ ಕ್ರಾಸ್‌ನಲ್ಲಿ ಮೆಟ್ರೋ ನಿಲ್ದಾಣವಿರುವುದರಿಂದ ಪಾದಚಾರಿಗಳ ಓಡಾಟ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಸ್ಕೈವಾಕ್ ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರೊಂದಿಗೆ ತಾತ್ಕಾಲಿಕವಾಗಿ ಸಂಚಾರ ಸುಗಮಗೊಳಿಸಲು ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಜೀಬ್ರಾ ಕ್ರಾಸಿಂಗ್, ರಸ್ತೆ ಲೈನ್ ಮಾರ್ಕಿಂಗ್, ಫೋರಂ ಮಾಲ್ ಬಳಿಯ ಮೆಟ್ರೋ ಜಾಗದಲ್ಲಿ ಫ್ರೀ ಲೆಫ್ಟ್ ವ್ಯವಸ್ಥೆ, ಮಾಲ್ ಮುಂಭಾಗದ ತಡೆಗೋಡೆ ತೆರವು ಹಾಗೂ ಪಾದಚಾರಿಗಳಿಗಾಗಿ ಮೆಟ್ಟಿಲುಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.
ಡಿಸೆಂಬರ್‌ನಲ್ಲೂ ಮುಂದುವರಿಯಲಿದೆ ‘ವಾರ್ಡ್ ಒನ್ ಅಭಿಯಾನ’:
ನವೆಂಬರ್ 1ರಿಂದ ಆರಂಭವಾದ ವಾರ್ಡ್ ಒನ್ ಅಭಿಯಾನದಡಿ ಇದುವರೆಗೆ ಮೂರು ಹಂತಗಳಲ್ಲಿ ಒಟ್ಟು 124 ವಾರ್ಡ್‌ಗಳ (ಕ್ರಮವಾಗಿ 43, 40 ಮತ್ತು 41 ವಾರ್ಡ್‌ಗಳು) ರಸ್ತೆ ಗುಂಡಿ, ಕಸ, ವಿದ್ಯುತ್, ಪಾದಚಾರಿ ಮಾರ್ಗ ಹಾಗೂ ಮರಗಳ ಕೊಂಬೆ ತೆರವು ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ಎಲ್ಲಾ 369 ವಾರ್ಡ್‌ಗಳಲ್ಲೂ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಡಿಸೆಂಬರ್ ತಿಂಗಳಲ್ಲೂ ಇದನ್ನು ಮುಂದುವರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ ಜೆಟ್ಟಿಂಗ್ ಯಂತ್ರಗಳ ಕಾರ್ಯವೈಖರಿ ಪರಿಶೀಲಿಸಿದ ಸಚಿವರು, ಸ್ಥಳೀಯ ಅಪಾರ್ಟ್‌ಮೆಂಟ್‌ಗಳ ಸಂಸ್ಕರಿಸಿದ ನೀರಿನ ಗುಣಮಟ್ಟ ಪರೀಕ್ಷಿಸಿ ಅದನ್ನು ಜೆಟ್ಟಿಂಗ್ ಯಂತ್ರಗಳಿಗೆ ಬಳಸಿಕೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಅಪರ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಮತ್ತು ಲೋಕೇಶ್ ಉಪಸ್ಥಿತರಿದ್ದರು.

