Sat. Nov 21st, 2026

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಎಐ ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ಜಾರಿ; ದ್ವಿಚಕ್ರ ವಾಹನಕ್ಕೆ ಗಂಟೆಗೆ 15 ಶುಲ್ಕ

Share this with Friends

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಹಾಗೂ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಎಚ್‌ಎಸ್‌ಆರ್ ಲೇಔಟ್‌ನ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.

ಜಯನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯಶಸ್ವಿಯಾದ ಬೆನ್ನಲ್ಲೇ, ಪಾಲಿಕೆಯು ಎಚ್‌ಎಸ್‌ಆರ್ ಲೇಔಟ್‌ನ 18.02 ಕಿ.ಮೀ ವ್ಯಾಪ್ತಿಯ 12 ಪ್ರಮುಖ ವಾಣಿಜ್ಯ ರಸ್ತೆಗಳಿಗೆ ವಲಯವಾರು ಪಾರ್ಕಿಂಗ್ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆಯಡಿ ದ್ವಿಚಕ್ರ ವಾಹನಗಳಿಗೆ ಅಂದಾಜು 3,355 ಹಾಗೂ ಕಾರುಗಳಿಗೆ 627ಕ್ಕೂ ಹೆಚ್ಚು ಪಾರ್ಕಿಂಗ್ ಸ್ಲಾಟ್‌ಗಳನ್ನು ಮೀಸಲಿಡಲಾಗಿದೆ. ಜೊತೆಗೆ ಸೈಕಲ್, ಆಟೋರಿಕ್ಷಾ, ಪಿಕ್-ಅಪ್ ಮತ್ತು ಡ್ರಾಪ್-ಆಫ್ ವಲಯಗಳು ಹಾಗೂ ವಿಶೇಷ ಚೇತನರು ಮತ್ತು ತುರ್ತು ಸೇವಾ ವಾಹನಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ.

ನೂತನ ವ್ಯವಸ್ಥೆಯಡಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 15 ಮತ್ತು ಕಾರುಗಳಿಗೆ 30 ಶುಲ್ಕ ನಿಗದಿಪಡಿಸಲಾಗಿದೆ. ಎಐ ಕ್ಯಾಮೆರಾಗಳು ನೈಜ ಸಮಯದಲ್ಲಿ ವಾಹನ ನಿಲುಗಡೆಯ ಮೇಲೆ ನಿಗಾ ವಹಿಸಲಿದ್ದು, ಶುಲ್ಕ ಸಂಗ್ರಹದಲ್ಲಿ ಪಾರದರ್ಶಕತೆ ತರಲು ಸಂಪೂರ್ಣವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಈ ಯೋಜನೆಯ ನಿರ್ವಹಣೆಗಾಗಿ ಟೆಂಡರ್ ಮೂಲಕ ಆಯ್ಕೆಯಾದ ‘ಪಾರ್ಕ್‌ಲ್ಯಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೊಂದಿಗೆ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ವೇಳೆ ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ್ ಕಬಾಡೆ, ಮಾಲತಿ ಹಾಗೂ ಕಾರ್ಯಪಾಲಕ ಎಂಜಿನಿಯರ್ ಜನಾರ್ದನ್ ಉಪಸ್ಥಿತರಿದ್ದರು.

 


Share this with Friends

Related Post