Sat. Nov 21st, 2026

ಸೊರಬದಲ್ಲಿ 2 ಕೋಟಿ ವೆಚ್ಚದ ಬುಡಕಟ್ಟು ವಸತಿ ಶಾಲೆ ಕಟ್ಟಡ ಉದ್ಘಾಟನೆ..!

Share this with Friends

ಶಿವಮೊಗ್ಗ: ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸುಮಾರು 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಸೊರಬ ವಿಧಾನಸಭಾ ಕ್ಷೇತ್ರದ ತಲವಾಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ನೂತನ ಹೆಚ್ಚುವರಿ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಭೂಮಿಪೂಜೆ:

ಇದೇ ವೇಳೆ ಗೌತಮಪುರ ಮತ್ತು ಹೊಸಬಾಳೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊಂಕೇರಿ ಬಳಿ 1.40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು. ಅಲ್ಲದೆ, ತಾಳಗುಪ್ಪ ಹೋಬಳಿಯ ಮಂಜಿನಕಾನು ಗ್ರಾಮದಿಂದ ಹಿರೇಮನಿ ಗ್ರಾಮಕ್ಕೆ ಸಂಪರ್ಕಿಸುವ 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ವರ್ಷವಿಡೀ ಪೌಷ್ಟಿಕ ಆಹಾರ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:

ಅರಣ್ಯದಂಚಿನ ಹಸಲರು ಮತ್ತು ಗೊಂಡ ಬುಡಕಟ್ಟು ಸಮುದಾಯಗಳ ಆರೋಗ್ಯ ರಕ್ಷಣೆಗಾಗಿ ಜಾರಿಗೊಳಿಸಿರುವ ಪೌಷ್ಟಿಕ ಆಹಾರ ವಿತರಣಾ ಯೋಜನೆಯಡಿ ಫಲಾನುಭವಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. 2018ರಲ್ಲಿ ಮಳೆಗಾಲದ ಆರು ತಿಂಗಳಿಗೆ ಮಾತ್ರ ಸೀಮಿತವಾಗಿದ್ದ ಈ ಯೋಜನೆಯನ್ನು 2024-25ನೇ ಸಾಲಿನಿಂದ ವರ್ಷದ ಎಲ್ಲಾ 12 ತಿಂಗಳಿಗೂ ವಿಸ್ತರಿಸಲಾಗಿದೆ.

ಕಾರ್ಯಕ್ರಮದಲ್ಲಿ ಹಿರೇಮನಿಯ ಹಿರಿಯರಾದ ಸಾವಿತ್ರಮ್ಮ ಹಾಗೂ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡಿದ ವಸತಿ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಅವರನ್ನು ಸಚಿವರು ಸನ್ಮಾನಿಸಿದರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡಿದಾಗ, ನಾಡಗೀತೆ ರಚಿಸಿದ ಕವಿ ಯಾರೆಂದು ಸಚಿವರು ಪ್ರಶ್ನಿಸಿದರು. ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಮಧು ಬಂಗಾರಪ್ಪ, ತಮಗೆ ಸನ್ಮಾನಿಸಲು ತಂದಿದ್ದ ಹಣ್ಣಿನ ಬುಟ್ಟಿಯನ್ನೇ ಮಕ್ಕಳಿಗೆ ನೀಡಿ ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ ಭದ್ರಾ ಕಾಡಾ ಸದಸ್ಯ ಗಣಪತಿ ಎಚ್. ಹುಲ್ತಿಕೊಪ್ಪ, ಬುಡಕಟ್ಟು ಸಮಾಜದ ಮುಖಂಡೆ ಲಕ್ಷಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಹುಚ್ಚಪ್ಪ ಮಂಡಗಳಲೆ, ಮುಖಂಡರಾದ ಲೋಕೇಶ್ ಗಾಳಿಪುರ, ಕಣ್ಣಪ್ಪ ಮಂಜಿನಕಾನೆ, ಅಶೋಕ್ ಬರದವಳ್ಳಿ, ಅನಿಲ್ ಗೌಡರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post