Sun. Nov 22nd, 2026

ಆಶಾ ಕಾರ್ಯಕರ್ತೆಯರ ಗೌರವಧನಕ್ಕೆ ಹಣವಿಲ್ಲ, ರಾಜಕೀಯ ನೇಮಕಾತಿಗಳಿಗೆ ನೂರಾರು ಕೋಟಿ ವೆಚ್ಚ: ವಿಜಯೇಂದ್ರ ಕಿಡಿ

Share this with Friends

ಶಿವಮೊಗ್ಗ: ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿದೆ ಎಂಬ ನೆಪವೊಡ್ಡಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ತನ್ನ ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸಲು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ವೈಖರಿ ಮತ್ತು ಆದ್ಯತೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ, ಜಾಹೀರಾತುಗಳ ಮೂಲಕ ಸಾಧನೆಯ ಕಪಟ ನಾಟಕವಾಡುತ್ತಿದೆ ಎಂದು ಟೀಕಿಸಿದರು.

ಗ್ಯಾರಂಟಿ ಸಮಿತಿಗಳ ಹೆಸರಿನಲ್ಲಿ ಹಣ ದುರುಪಯೋಗ:

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರನ್ನು ನೇಮಿಸಿ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ. ಇದರ ಜೊತೆಗೆ ಭಾರತ್ ಜೋಡೋ ಅನುಷ್ಠಾನ ಸಮಿತಿಗೆ 35 ಕೋಟಿ ಮೀಸಲಿಡಲಾಗಿದೆ. ಬರಗಾಲದ ಸಂದರ್ಭದಲ್ಲಿ ಇಂತಹ ಸಮಿತಿಗಳ ರಚನೆ ಕಾಂಗ್ರೆಸ್ ಕಾರ್ಯಕರ್ತರಿಗೆ ‘ಗಂಜಿ ಕೇಂದ್ರ’ ತೆರೆಯುವ ಪ್ರಯತ್ನವಾಗಿದೆ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗೆ 350 ಕೋಟಿ ಭಾರವೇ?

ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಹಿರಿಯೂರಿನಲ್ಲಿ ತಾನು ಅವರ ಸಹೋದರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು, ಈಗ ಹಣಕಾಸಿನ ಅಡಚಣೆಯ ನೆಪ ಹೇಳಿ ಪಾಠ ಹೇಳಿ ಕಳುಹಿಸಿದ್ದಾರೆ. ವರ್ಷಕ್ಕೆ 350 ಕೋಟಿ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಭಾರವಾಗಿದೆಯೇ? ರಸ್ತೆ ಅಭಿವೃದ್ಧಿಗೆ 16 ಸಾವಿರ ಕೋಟಿ ಹಾಗೂ ದಕ್ಷಿಣ ಕನ್ನಡಕ್ಕೆ 32 ಸಾವಿರ ಕೋಟಿ ಪ್ಯಾಕೇಜ್ ಘೋಷಿಸುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ನೀಡಲು ಮಾತ್ರ ಹಣವಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ಬರಗಾಲದ ನಡುವೆ ಮುಖ್ಯಮಂತ್ರಿಗಳ ನಿವಾಸದ ಅಲಂಕಾರಕ್ಕೆ 100 ಕೋಟಿ ಖರ್ಚು ಮಾಡಿರುವುದು ಅವರ ಜನಸೇವೆಯ ಬದ್ಧತೆಯನ್ನು ಪ್ರಶ್ನಿಸುವಂತಿದೆ ಎಂದರು.

ಹಿರಿಯೂರು ಉಪಚುನಾವಣೆ ಹಾಗೂ ಕಾಡುಗೊಲ್ಲ ಸಮುದಾಯ:

ಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ. ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಚುನಾವಣೆ ಹತ್ತಿರ ಬಂದಿರುವುದರಿಂದ ಮುಖ್ಯಮಂತ್ರಿಗಳು ಕಾಡುಗೊಲ್ಲ ಸಮುದಾಯದ ಬಗ್ಗೆ ‘ಮೊಸಳೆ ಕಣ್ಣೀರು’ ಸುರಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಈ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಸರ್ಕಾರ ಏನು ಮಾಡಿದೆ? ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಹಿರಿಯೂರಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು ಎಂದು ವಿಜಯೇಂದ್ರ ತಿರುಗೇಟು ನೀಡಿದರು.

ಚಳಿಗಾಲದ ಅಧಿವೇಶನದಲ್ಲಿ ಹೋರಾಟದ ಎಚ್ಚರಿಕೆ:

ಗ್ಯಾರಂಟಿಗಳ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿರುವ ಸರ್ಕಾರದ ವಿರುದ್ಧ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಇದೇ ವೇಳೆ, ಅಣ್ಣ ಬಸವಣ್ಣನವರ ಕುರಿತು ಪುಸ್ತಕದಲ್ಲಿ ಆಕ್ಷೇಪಾರ್ಹವಾಗಿ ಬರೆದಿರುವ ರವಿ ಹಂಚ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಣ ಸಚಿವರು ನೀಡಿರುವ ಉದ್ಧಟತನದ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

 


Share this with Friends

Related Post