Sun. Nov 22nd, 2026

ಜನವರಿಯಲ್ಲಿ ದೇಶದ ಮೊದಲ ಋತುಬಂಧ ಸಮ್ಮೇಳನಕ್ಕೆ ಸಿದ್ಧತೆ: ನಟಿ ರಮ್ಯಾ

Share this with Friends

ಬೆಂಗಳೂರು: ರಾಜ್ಯದ 35 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರ ಮಧ್ಯವಯಸ್ಸಿನ (ಮಿಡ್‌ಲೈಫ್) ಆರೋಗ್ಯ ರಕ್ಷಣೆಗಾಗಿ ರೂಪಿಸಲಾಗಿರುವ ವಿಶೇಷ ನೀತಿಯ ಕುರಿತಾದ ಶ್ವೇತಪತ್ರವನ್ನು (White Paper) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯದ ಪ್ರಮುಖ ಸಚಿವರಿಗೆ ಸಲ್ಲಿಸಲಾಗಿದೆ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತಿಳಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಈ ಮಹತ್ವದ ವರದಿಯನ್ನು ಹಸ್ತಾಂತರಿಸಿರುವುದಾಗಿ ಹೇಳಿದ್ದಾರೆ.

ಎಲ್ಲಾ ವರ್ಗದ ಮಹಿಳೆಯರನ್ನು ಒಳಗೊಳ್ಳುವ ನೀತಿ:

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರ ಸಹಯೋಗದೊಂದಿಗೆ ಈ ಶ್ವೇತಪತ್ರವನ್ನು ಸಿದ್ಧಪಡಿಸಲಾಗಿದೆ. ಸಂಸ್ಥೆಯ ಪ್ರೊ. ಪ್ರಭ್‌ದೀಪ್ ಕೌರ್, ಸಹಾಯಕ ಪ್ರಾಧ್ಯಾಪಕಿ ಉತ್ತರಾ ಪರ್ತಾಪ್, ಡಾ. ಸುರಮ್ಯ ಅಸ್ಥಾನ ಹಾಗೂ ಸಾರ್ವಜನಿಕ ಆರೋಗ್ಯ ಸಂಶೋಧಕಿ ಡಾ. ಸ್ವಾತಿ ಸಕ್ಸೇನಾ ಅವರ ತಾಂತ್ರಿಕ ನೆರವಿನೊಂದಿಗೆ ಈ ವರದಿ ರೂಪುಗೊಂಡಿದೆ.

ನಗರ ಅಥವಾ ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ, ಸರ್ಕಾರಿ, ಖಾಸಗಿ ವಲಯದಲ್ಲಿ ದುಡಿಯುವವರು ಹಾಗೂ ಗೃಹಿಣಿಯರು ಸೇರಿದಂತೆ 35 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯನ್ನೂ ಈ ಆರೋಗ್ಯ ನೀತಿಯ ವ್ಯಾಪ್ತಿಗೆ ತರುವ ಉದ್ದೇಶವನ್ನು ಇದು ಹೊಂದಿದೆ.

ಜನವರಿಯಲ್ಲಿ ಐತಿಹಾಸಿಕ ಸಮ್ಮೇಳನ:

ಮುಂಬರುವ ಜನವರಿ ತಿಂಗಳಲ್ಲಿ ಭಾರತದ ಮೊದಲ ‘ಋತುಬಂಧ (ಮೆನೋಪಾಸ್) ಸಮ್ಮೇಳನ’ ಆಯೋಜಿಸಲು ಸಿದ್ಧತೆ ನಡೆದಿದೆ. ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಋತುಬಂಧ ತಜ್ಞರು, ಭಾರತೀಯ ವೈದ್ಯರು, ಸಂಶೋಧಕರು, ನೀತಿ ನಿರೂಪಕರು ಮತ್ತು ಉದ್ಯೋಗದಾತರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಮಹಿಳೆಯರ ಮಧ್ಯವಯಸ್ಸಿನ ಆರೋಗ್ಯ ಸೇವೆಯ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವದ ಮೈಲಿಗಲ್ಲಾಗಲಿದೆ ಎಂದು ರಮ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 


Share this with Friends

Related Post