Mon. Nov 23rd, 2026

ರಾಜ್ಯದಲ್ಲಿ ಕ್ಲಸ್ಟರ್ ಕಿಚನ್ ಸ್ಥಾಪನೆ ಇಲ್ಲ; ಬಿಸಿಯೂಟ ನೌಕರರಿಗೆ ಸಚಿವ ಮಧು ಬಂಗಾರಪ್ಪ ಅಭಯ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಯಾವುದೇ ಕಾರಣಕ್ಕೂ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು (ಕ್ಲಸ್ಟರ್ ಕಿಚನ್) ಆರಂಭಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಬಿಸಿಯೂಟ ಸಿಬ್ಬಂದಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್. ಬಾಲನ್ ನೇತೃತ್ವದ ನಿಯೋಗವು ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ವೇತನ ಹೆಚ್ಚಳ ಕುರಿತು ಸಿಎಂ ಜೊತೆ ಚರ್ಚೆ:

ಕೇರಳದ ಮಾದರಿಯಲ್ಲಿ ರಾಜ್ಯದ ಬಿಸಿಯೂಟ ನೌಕರರಿಗೂ ಮಾಸಿಕ ₹12 ಸಾವಿರ ವೇತನ ನಿಗದಿಪಡಿಸಬೇಕು ಎಂದು ನಿಯೋಗವು ಸಚಿವರನ್ನು ಒತ್ತಾಯಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ವೇತನ ಪರಿಷ್ಕರಣೆ ವಿಚಾರ ನನ್ನೊಬ್ಬನ ನಿರ್ಧಾರಕ್ಕೆ ಒಳಪಟ್ಟಿಲ್ಲ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಖಂಡಿತವಾಗಿ ಸಮಾಲೋಚನೆ ನಡೆಸುತ್ತೇನೆ. ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವಷ್ಟು ವೇತನ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಹಿಂದೆ ನಮ್ಮ ಸರ್ಕಾರವೇ ನೌಕರರ ಇಡುಗಂಟನ್ನು ₹40 ಸಾವಿರಕ್ಕೆ ಏರಿಸಿತ್ತು” ಎಂದು ತಿಳಿಸಿದರು. ಅಲ್ಲದೆ, ಈ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವೂ ಇರುವುದರಿಂದ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರದ ಮೇಲೂ ಒತ್ತಡ ತರುವಂತೆ ನಿಯೋಗಕ್ಕೆ ಸಲಹೆ ನೀಡಿದರು.

ಕಳಪೆ ಆಹಾರ ಧಾನ್ಯ ಪೂರೈಸಿದರೆ ಕಠಿಣ ಕ್ರಮ:

ಕೆಲವು ಶಾಲೆಗಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆಯಾಗುತ್ತಿರುವ ಬಗ್ಗೆ ನಿಯೋಗವು ಸಚಿವರ ಗಮನಕ್ಕೆ ತಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, “ಮಕ್ಕಳ ಆಹಾರದ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕಳಪೆ ಧಾನ್ಯ ಪೂರೈಸುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ ನಿಖರ ಮಾಹಿತಿ ನೀಡಿ” ಎಂದು ಸೂಚಿಸಿದರು.

ಪ್ರತಿಭಟನೆ ಕೈಬಿಡಲು ಮನವಿ:

ಕನಿಷ್ಠ 1 ಲಕ್ಷ ಇಡುಗಂಟು, ಮಾಸಿಕ 5 ಸಾವಿರ ಪಿಂಚಣಿ ಹಾಗೂ ಶಾಲಾ ಮುಖ್ಯಶಿಕ್ಷಕರು ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯುವಂತೆ ನಿಯೋಗ ಬೇಡಿಕೆ ಇಟ್ಟಿತು. “ಪ್ರತಿಭಟನೆ ನಡೆಸುವುದು ನಿಮ್ಮ ಹಕ್ಕು, ಆದರೆ ಸರ್ಕಾರ ನಿಮ್ಮ ಪರವಾಗಿದೆ. ಸದ್ಯಕ್ಕೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿ” ಎಂದು ಸಚಿವರು ನೌಕರರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಯೂನಿಯನ್ ರಾಜ್ಯ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಕಾರ್ಯದರ್ಶಿ ಕಲ್ಪನಾ ವಿ.ಜಿ., ಖಜಾಂಚಿ ಪುಷ್ಪಲತಾ ಸೇರಿದಂತೆ ಹಲವು ಪದಾಧಿಕಾರಿಗಳು ಹಾಜರಿದ್ದರು.

 


Share this with Friends

Related Post