ಬೆಂಗಳೂರು: ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ತವರು ನಗರ ಬೆಂಗಳೂರಿಗೆ ಆಗಮಿಸಿದ್ದು, ನಗರದ ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ‘ಸೆಂಟ್ರಲ್ ಟಿಫಿನ್ ರೂಮ್’ (CTR / ಶ್ರೀ ಸಾಗರ್) ಹೋಟೆಲ್ಗೆ ಭೇಟಿ ನೀಡಿ ಫಿಲ್ಟರ್ ಕಾಫಿ ಮತ್ತು ತಿಂಡಿಯ ಸವಿ ಸವಿದಿದ್ದಾರೆ.
ಈ ಕುರಿತು ಸಿಟಿಆರ್ ಹೋಟೆಲ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ ಅವರೊಂದಿಗಿನ ಸುಂದರ ಸೆಲ್ಫಿ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ
ಹಳೆಯ ದಿನಗಳನ್ನು ನೆನಪಿಸಿಕೊಂಡ ದೀಪಿಕಾ:
“ನಿಮ್ಮ ಪ್ರೀತಿ ಮತ್ತು ಆತ್ಮೀಯತೆಗೆ ಹೃದಯಪೂರ್ವಕ ಧನ್ಯವಾದಗಳು” ಎಂದು ಕನ್ನಡದಲ್ಲಿ ಸಾಲುಗಳನ್ನು ಬರೆದುಕೊಂಡಿರುವ ಸಿಟಿಆರ್ ತಂಡ, ದೀಪಿಕಾ ಅವರೊಂದಿಗಿನ ಭೇಟಿಯ ಕ್ಷಣಗಳನ್ನು ಅಕ್ಷರ ರೂಪದಲ್ಲಿ ಹಂಚಿಕೊಂಡಿದೆ. “ಕೆಲವು ಕಪ್ ಫಿಲ್ಟರ್ ಕಾಫಿ ಹೀರುತ್ತಾ ನಡೆದ ಮಾತುಕತೆಯಲ್ಲಿ ಹಳೆಯ ಮಲ್ಲೇಶ್ವರಂ, ಹೂವಿನ ಮಾರುಕಟ್ಟೆ, ದೇವಸ್ಥಾನಗಳು ಹಾಗೂ ಅಂದಿನ ಪ್ರಶಾಂತ ಮುಂಜಾನೆಯ ನೆನಪುಗಳು ತೆರೆದುಕೊಂಡವು. ನಮ್ಮಂತೆಯೇ ಆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವವರೊಂದಿಗೆ ಮಾತನಾಡುವುದು ಯಾವಾಗಲೂ ಖುಷಿ ನೀಡುತ್ತದೆ” ಎಂದು ಹೋಟೆಲ್ ಆಡಳಿತ ಮಂಡಳಿ ಭಾವುಕವಾಗಿ ಬರೆದುಕೊಂಡಿದೆ.
ಸದಾ ಸಮಯ ಮೀಸಲಿಡುವ ಸರಳತೆ:
“ದೀಪಿಕಾ ಪಡುಕೋಣೆ ಅವರನ್ನು ಮತ್ತೊಮ್ಮೆ ಸಿಟಿಆರ್ಗೆ ಸ್ವಾಗತಿಸಿದ್ದು ನಮಗೆ ಅತ್ಯಂತ ಸಂತೋಷ ತಂದಿದೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗಲೂ ನಮಗಾಗಿ ಸಮಯ ಮೀಸಲಿಡುವುದಕ್ಕೆ ಮತ್ತು ನಿಮ್ಮೊಂದಿಗೆ ತರುವ ಆತ್ಮೀಯತೆಗೆ ಧನ್ಯವಾದಗಳು” ಎಂದು ಸಿಟಿಆರ್ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಬೆಳೆದ ದೀಪಿಕಾ ಪಡುಕೋಣೆ ಅವರಿಗೆ ಮಲ್ಲೇಶ್ವರಂನ ಸಿಟಿಆರ್ನ ಬೆಣ್ಣೆ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಎಂದರೆ ಎಲ್ಲಿಲ್ಲದ ಪ್ರೀತಿ. ಎಷ್ಟೇ ದೊಡ್ಡ ಜಾಗತಿಕ ತಾರೆಯಾದರೂ ತವರು ನೆಲದ ಹಳೆಯ ರುಚಿ ಮತ್ತು ನೆನಪುಗಳನ್ನು ಮರೆಯದ ದೀಪಿಕಾ ಅವರ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

