Sun. Nov 22nd, 2026

ಅರಣ್ಯ ಕಾಯ್ದೆ ಸಂಕಷ್ಟ: ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲವೆಂದ ಕುಮಾರಸ್ವಾಮಿ

Share this with Friends

ಸೋಮವಾರಪೇಟೆ (ಕೊಡಗು): ಅರಣ್ಯ ಕಾಯ್ದೆಗಳ ಅನುಷ್ಠಾನದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಹಾಗೂ ಮಲೆನಾಡಿನ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರೈತ ಮುಖಂಡ ಹಾಗೂ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರ ಕುರಿತಾದ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಇನ್ನು 15 ದಿನಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಕೊಡಗಿನ 4-5 ಪ್ರಮುಖ ರೈತ ಮುಖಂಡರು ಮತ್ತು ವಕೀಲರ ನಿಯೋಗ ದೆಹಲಿಗೆ ಬನ್ನಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಸೇರಿ ನಾನೇ ಖುದ್ದು ನಿಮ್ಮನ್ನು ಕೇಂದ್ರ ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಬಳಿಗೆ ಕರೆದೊಯ್ದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.

ಕಚೇರಿಯಲ್ಲಿ ಕುಳಿತು ನಕ್ಷೆ ತಯಾರಿಸುವ ಅಧಿಕಾರಿಗಳ ವಿರುದ್ಧ ಕಿಡಿ:

ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬ ವಾದವನ್ನು ತಿರಸ್ಕರಿಸಿದ ಸಚಿವರು, “ಕಾಡಿನ ಮಕ್ಕಳಾಗಿ ರೈತರು ಪ್ರಕೃತಿಯನ್ನು ಜವಾಬ್ದಾರಿಯಿಂದ ರಕ್ಷಿಸುತ್ತಿದ್ದಾರೆ. ಕೇವಲ ಅರಣ್ಯ ಇಲಾಖೆಯಿಂದಷ್ಟೇ ಕಾಡು ಉಳಿದಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲೇ ಕುಳಿತು ನಕ್ಷೆ ತಯಾರಿಸುವುದರಿಂದ ನೈಜ ಕೃಷಿ ಭೂಮಿಯ ರೈತರಿಗೆ ತೊಂದರೆಯಾಗುತ್ತಿದೆ. ಕಳೆದ 45-50 ವರ್ಷಗಳಿಂದ ಈ ಸಮಸ್ಯೆ ಬಗೆಹರಿಯದಿರುವುದು ದುರದೃಷ್ಟಕರ. ನೂರಾರು ವರ್ಷಗಳಿಂದ ಭೂಮಿಯನ್ನು ನಂಬಿ ಬದುಕುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ” ಎಂದು ಗುಡುಗಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಕುಮಾರಸ್ವಾಮಿ, “ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 15 ಲಕ್ಷ ಸಸಿ ನೆಟ್ಟಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಅಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಾವಿರ ಗಿಡಗಳೂ ಕಾಣುವುದಿಲ್ಲ. ಒಂದು ಕಡೆ ಅರಣ್ಯ ರಕ್ಷಣೆಯ ಮಾತನಾಡುವ ಸರ್ಕಾರ, ಮತ್ತೊಂದೆಡೆ ರೈತರಿಗೆ ಕಿರುಕುಳ ನೀಡುತ್ತಿದೆ” ಎಂದು ವ್ಯಂಗ್ಯವಾಡಿದರು.

ಹಳ್ಳಿ ಯುವಕರಿಗೆ ಹೆಣ್ಣು ಕೊಡಲು ಬೇಡುವ ಕಾಲ ಬರಲಿದೆ:

ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಶಾಸಕ ಮಂಥರ್ ಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, “ನಗರಗಳಲ್ಲಿ ವಾಸಿಸುವ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಹಳ್ಳಿಯ ರೈತ ಯುವಕರಿಗೆ ಕೊಟ್ಟು ಮದುವೆ ಮಾಡಲು ಬೇಡುವಂತಹ ಕಾಲ ಖಂಡಿತ ಬಂದೇ ಬರುತ್ತದೆ, ಇದನ್ನು ಬರೆದಿಟ್ಟುಕೊಳ್ಳಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ₹300 ಸಂಬಳದಿಂದ ಜೀವನ ಆರಂಭಿಸಿ ಕೃಷಿ, ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿರುವ ಹರಪಳ್ಳಿ ರವೀಂದ್ರ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಜೆ. ಬೋಪಯ್ಯ, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಮಂಥರ್ ಗೌಡ, ಮಾಜಿ ಎಂಎಲ್‌ಸಿ ಮೇದಪ್ಪ, ಮಾಜಿ ಶಾಸಕರಾದ ಮಾದೇಗೌಡ, ಮಹದೇವ್, ಮುಖಂಡರಾದ ಸುರೇಶ್, ಸಂಕೇತ್ ಪೂವಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

 


Share this with Friends

Related Post