ಬೆಂಗಳೂರು: ರಾಜಧಾನಿಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಆಧುನಿಕ ‘ಜೆಟ್ ಸ್ಪ್ರೇ’ (Jet Spray) ವಾಹನಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಕಳೆದ ರಾತ್ರಿ ವಿಧಾನಸೌಧದ ಮುಂಭಾಗದಲ್ಲಿ ಈ ವಾಹನದ ಪ್ರಾಯೋಗಿಕ ಪ್ರದರ್ಶನ ನಡೆಯಿತು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದ ಮೇರೆಗೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಬಳಿಯಿರುವ ಐದು ಜೆಟ್ ಸ್ಪ್ರೇ ವಾಹನಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಿಗೆ ತಲಾ ಒಂದರಂತೆ ನಿಯೋಜಿಸಲಾಗುತ್ತಿದೆ.
ಸ್ವತಃ ಸ್ವಚ್ಛತಾ ಕಾರ್ಯ ನಡೆಸಿದ ಆಯುಕ್ತರು:
ವಿಧಾನಸೌಧದ ಮುಂಭಾಗ ನಡೆದ ಪ್ರಾಯೋಗಿಕ ಪ್ರದರ್ಶನವನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಹಾಗೂ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತ ವೆಂಕಟ ಚಲಪತಿ ಆರ್. ಅವರು ಪರಿಶೀಲಿಸಿದರು. ಇದೇ ವೇಳೆ ಅಧಿಕಾರಿಗಳು ಸ್ವತಃ ಜೆಟ್ ಸ್ಪ್ರೇ ವ್ಯವಸ್ಥೆಯನ್ನು ಬಳಸಿ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸುವ ಮೂಲಕ ವಾಹನದ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದರು.
ಪ್ರತಿ ವಿಭಾಗಕ್ಕೂ ಒಂದು ವಾಹನ ನಿಯೋಜನೆಗೆ ಸೂಚನೆ:
ಬಳಿಕ ಮಾತನಾಡಿದ ಆಯುಕ್ತ ಜಗದೀಶ್ ಜಿ., “ನಗರದ ಪಾದಚಾರಿ ಮಾರ್ಗಗಳು (ಫುಟ್ಪಾತ್), ನಾಮಫಲಕಗಳು, ರಸ್ತೆ ಬದಿಯ ಕರ್ಬ್ಗಳು ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿರುವ ಧೂಳು ಮತ್ತು ಕೊಳೆಯನ್ನು ತ್ವರಿತವಾಗಿ ಸ್ವಚ್ಛಗೊಳಿಸಲು ಜೆಟ್ ಸ್ಪ್ರೇ ವಾಹನಗಳು ಅತ್ಯಂತ ಉಪಯುಕ್ತವಾಗಿವೆ” ಎಂದು ತಿಳಿಸಿದರು. ಅಲ್ಲದೆ, ಸ್ವಚ್ಛತಾ ಅಭಿಯಾನವನ್ನು ಮತ್ತಷ್ಟು ಬಲಪಡಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೂ ತಲಾ ಒಂದು ಜೆಟ್ ಸ್ಪ್ರೇ ವಾಹನವನ್ನು ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಹೇಮಂತ್ ಶರಣ್, ಸಪ್ತಶ್ರೀ, ಮುಖ್ಯ ಎಂಜಿನಿಯರ್ಗಳಾದ ವಿಜಯ್ ಕುಮಾರ್, ಹರಿದಾಸ್, ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್, ಆರೋಗ್ಯಾಧಿಕಾರಿ ಶಿವಕುಮಾರ್, ಡಿಜಿಎಂ ಭೀಮೇಶ್ ನಾಯಕ್, ಕಾರ್ಯಪಾಲಕ ಎಂಜಿನಿಯರ್ಗಳು, ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

