ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ಹಗಲು-ರಾತ್ರಿ ಎನ್ನದೆ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಜೆಡಿಎಸ್ ಕೇಂದ್ರ ಕಚೇರಿ ‘ಜೆ.ಪಿ. ಭವನ’ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮುಖ್ಯಮಂತ್ರಿಗಳದ್ದು ಬಂಡೆಯಂತಹ ಹೃದಯವಲ್ಲ, ಹೂವಿನಂತಹ ಮೃದು ಹೃದಯ ಎಂದು ಭಾವಿಸಿದ್ದೆ. ಆದರೆ ಆಶಾ ಕಾರ್ಯಕರ್ತೆಯರ ನೋವಿಗೆ ಇಷ್ಟೊತ್ತಿಗಾಗಲೇ ಅವರ ಹೃದಯ ಕರಗಬೇಕಿತ್ತು. ಬಹುಶಃ ಜಪಾನ್ ಪ್ರವಾಸ ಮುಗಿಸಿ ವಾಪಸ್ ಬಂದ ಮೇಲಾದರೂ ಈ ಹೆಣ್ಣುಮಕ್ಕಳ ಸಂಕಷ್ಟಕ್ಕೆ ಅವರು ಮಿಡಿಯಬಹುದು ಎಂಬ ನಿರೀಕ್ಷೆಯಿದೆ” ಎಂದು ವ್ಯಂಗ್ಯವಾಡಿದರು.
ಪ್ರಣಾಳಿಕೆಯ ಭರವಸೆ ಏನಾಯಿತು?
ಬೆಲೆ ಏರಿಕೆಯ ಈ ಕಾಲದಲ್ಲಿ ಆಶಾ ಕಾರ್ಯಕರ್ತೆಯರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಹಣಕಾಸು ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಗೌರವಧನ ಹೆಚ್ಚಳ ಮಾಡುವುದು ಸರ್ಕಾರಕ್ಕೆ ಕಷ್ಟವೇನಲ್ಲ. ‘ಭಾರತ ಜೋಡೋ’ ಸಂಘಗಳ ಮೂಲಕ ಕಾರ್ಯಕರ್ತರಿಗೆ ₹1,000 ಕೋಟಿ ನೀಡುವ ಸರ್ಕಾರಕ್ಕೆ, ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬರ ಪರಿಹಾರಕ್ಕಾಗಿ ಲಂಡನ್ ಕೋರ್ಟ್ಗೆ ಹೋಗಲಿ!
ಕೇಂದ್ರದಿಂದ ಬರ ಪರಿಹಾರ ಬಿಡುಗಡೆಯಾಗದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ರಾಜ್ಯ ಸರ್ಕಾರ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ನೈಸ್ ಪ್ರಾಜೆಕ್ಟ್ ವಿವಾದ ಎದುರಾದಾಗ ಸುಪ್ರೀಂ ಕೋರ್ಟ್, ಹೈಕೋರ್ಟ್ ಬಿಟ್ಟು ಲಂಡನ್ ಕೋರ್ಟ್ಗೆ ಹೋಗಬೇಕು ಎಂದು ಈ ಕಾಂಗ್ರೆಸ್ ಮಹಾನುಭಾವರೇ ತೀರ್ಮಾನಿಸಿದ್ದರು. ಈಗ ಬರ ಪರಿಹಾರದ ವಿಚಾರಕ್ಕೂ ಬೇಕಿದ್ದರೆ ಅವರು ಲಂಡನ್ ಕೋರ್ಟ್ಗೆ ಹೋಗಬಹುದು” ಎಂದು ಟಾಂಗ್ ನೀಡಿದರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯಲಿಲ್ಲ. ಕೊಡಗು ಪ್ರವಾಹದ ವೇಳೆ ಕೇಂದ್ರದ ಅನುದಾನಕ್ಕೆ ಕಾಯದೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಟ್ಟು, ಅಲ್ಲಿಯವರೆಗೆ ಮಾಸಿಕ ₹10 ಸಾವಿರ ಬಾಡಿಗೆ ನೀಡಿದ್ದೆ ಎಂದು ನೆನಪಿಸಿಕೊಂಡರು.
ಹಿರಿಯೂರು ಟಿಕೆಟ್ ವಿಚಾರದಲ್ಲಿ ಆತುರವಿಲ್ಲ:
ಹಿರಿಯೂರು ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಹೆಚ್ಡಿಕೆ, “ಈ ವಿಚಾರದಲ್ಲಿ ನನಗೆ ಯಾವುದೇ ಆತುರವಿಲ್ಲ. ಮೈತ್ರಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವುದಷ್ಟೇ ನನ್ನ ಮೊದಲ ಆದ್ಯತೆ. ಸದ್ಯ ಮುಖ್ಯಮಂತ್ರಿಗಳೇ ಹಿರಿಯೂರು ಕ್ಷೇತ್ರದಲ್ಲಿ ಸಾಕಷ್ಟು ಓಡಾಡುತ್ತಿದ್ದು, ಆ ಕ್ಷೇತ್ರವನ್ನು ದತ್ತು ಪಡೆದು ಕನಕಪುರದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಾರಂತೆ” ಎಂದು ಲೇವಡಿ ಮಾಡಿದರು.
ಇದೇ ವೇಳೆ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು ಹಾಗೂ ಅಗತ್ಯವಿದ್ದರೆ ಬಿಜೆಪಿ ಜೊತೆಯೂ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮುಖಂಡ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

