Mon. Nov 23rd, 2026

ಕಾಡಾನೆಗಳ ಹಿಮ್ಮೆಟ್ಟಿಸುವ ಕಾರ್ಯಾಚರಣೆ: ಮೂಡಿಗೆರೆ ವಲಯದ ಹಲವು ಗ್ರಾಮಗಳಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿ

Share this with Friends

ಮೂಡಿಗೆರೆ (ಚಿಕ್ಕಮಗಳೂರು): ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಭದ್ರಾ ವನ್ಯಜೀವಿ ವಿಭಾಗಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಮೂಡಿಗೆರೆ ವಲಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 (ನಿಷೇಧಾಜ್ಞೆ) ಜಾರಿಗೊಳಿಸಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅಶ್ವಿನಿ ಎಸ್. ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರಮುಖ ಅಂಶಗಳು:

ವಲಯ ಅರಣ್ಯಾಧಿಕಾರಿಗಳ ಮನವಿಯ ಮೇರೆಗೆ ನವೆಂಬರ್ 23, 2026ರಂದು ಈ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೂಡಿಗೆರೆ ವಲಯದ ಗೋಣಿಬೀಡು ಶಾಖೆ, ಕಸಬಾ ಶಾಖೆ, ಮೂಡಿಗೆರೆ ಶಾಖೆ ಮತ್ತು ತತ್ಕೋಳ ಶಾಖೆಯ ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪನ್ನು ಭದ್ರಾ ಅಭಯಾರಣ್ಯದತ್ತ ಅಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಡಾನೆಗಳು ಗ್ರಾಮಗಳ ಮೂಲಕ ಹಾದುಹೋಗುವಾಗ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು, ಆ ಭಾಗದ ಗ್ರಾಮ ಹಾಗೂ ಉಪಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರಮುಖ ಗ್ರಾಮಗಳು:

ಜೆ. ಹೊಸಹಳ್ಳಿ, ಟಾಟಾ ಎಸ್ಟೇಟ್, ಫ್ಲೋರಿಯಾ ಕಾಲೋನಿ, ಹೊಸಪುರ, ಗೋಣಿಬೀಡು, ಮತ್ತಿ, ಪಾಲೆಕರಟ್ಟಿ, ಆನೆದಿಬ್ಬ, ಸಾಲುಮರ, ಕನ್ನೆಬೈಲ್, ಕಲುಗುಡ್ಡ, ಕಮರುಗೋಡು, ಗಾಡಿಚೌಕ, ಶುಭನಗರ, ಮಣ್ಣಿಕೆರೆ, ಚಂದ್ರಪುರ, ಪಾಟಿಹಳ್ಳಿ, ಕಲ್ಲಗಂದಿ, ಗೌತಹಳ್ಳಿ, ಪುರ, ಚಿಟ್ಟಹಳ್ಳಿ, ಸಂಗಮಾಪುರ, ಕನ್ನಾಪುರ, ಮಾಳಹಳ್ಳಿ, ಕಾರಬೈಲ್, ಬೊಮ್ಮನಹಳ್ಳಿ, ಮಾಕೋನಹಳ್ಳಿ, ಕೆಲ್ಲೂರು, ಹಳಸೆ, ಮೂಡಸಸಿ, ಭಟ್ಟದಹಳ್ಳಿ, ಕುನ್ನಹಳ್ಳಿ, ಬಾರದಹಳ್ಳಿ, ದುಂಡುಗ, ಇಂದಾವಳ್ಳಿ, ನಂದಿಪುರ, ಕಡೇಮಾಡ್ಕಲ್, ಹೊಸಗಲ್, ಸಿದ್ದಾರ್ಧವನ, ಹಳದಗಂದಿ ಹಾಗೂ ತತ್ಕೋಳ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಆದೇಶ ಅನ್ವಯವಾಗಲಿದೆ.

ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಮತ್ತು ಕಾಫಿ ಬೆಳೆಗಾರರು ಅರಣ್ಯ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಮತ್ತು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ತಾಲೂಕು ಆಡಳಿತ ಸೂಚಿಸಿದೆ.

 

 


Share this with Friends

Related Post