ಬೆಂಗಳೂರು: ಹಾಸನದ ಬೇಲೂರು ಮತ್ತು ಚಿಕ್ಕಮಗಳೂರು ಭಾಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾನವ-ಆನೆ ಸಂಘರ್ಷ ಹಾಗೂ ಕಾಡಾನೆಗಳ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿದಂತೆ ” ಸ್ಥಳೀಯ ಶಾಸಕರೇ ಸೂಕ್ತ ಪರಿಹಾರ ಸೂಚಿಸಲಿ; ಅವರು ಹೇಳಿದಂತೆಯೇ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ಹಾಗೂ ಚಿಕ್ಕಮಗಳೂರು ಎರಡೂ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ಸಮತೋಲಿತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೇಲೂರಿನಲ್ಲಿ ಹೆಚ್ಚಾದ ಆನೆಗಳ ಸಂಖ್ಯೆ:
ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ ಸಚಿವರು, “ಬೇಲೂರು ತಾಲೂಕಿನಲ್ಲಿ ಕೇವಲ 13,917 ಎಕರೆ ಅರಣ್ಯ ಪ್ರದೇಶವಿದ್ದು, 2019ರಲ್ಲಿ ಇಲ್ಲಿ ಕೇವಲ 7 ಆನೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇಲ್ಲಿನ ಅರಣ್ಯವು ಕಾಫಿ ತೋಟ ಮತ್ತು ಗ್ರಾಮಗಳ ನಡುವೆ ಹಂಚಿಹೋಗಿರುವುದರಿಂದ ಆನೆಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಟ್ಟು ಬೆಳೆ ಹಾಗೂ ಜೀವಹಾನಿ ಉಂಟುಮಾಡುತ್ತಿವೆ” ಎಂದರು.
ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರದ ಆತಂಕ:
ಬಫರ್ ವಲಯ ಸೇರಿ ಒಟ್ಟು 2.62 ಲಕ್ಷ ಎಕರೆ ವಿಸ್ತೀರ್ಣವಿರುವ ಭದ್ರಾ ಅರಣ್ಯಕ್ಕೆ ಈ ಆನೆಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆಯಿದೆ. ಆದರೆ, ಅಲ್ಲಿಗೆ ಬಿಟ್ಟ ಆನೆಗಳು ಮತ್ತೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಜನವಸತಿ ಭಾಗಗಳಿಗೆ ವಾಪಸಾಗಬಹುದು ಎಂಬ ಆತಂಕವನ್ನು ಸ್ಥಳೀಯ ಶಾಸಕರು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರತಿವರ್ಷ ವನ್ಯಜೀವಿ ದಾಳಿಯಿಂದ 40ರಿಂದ 45 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಆವಾಸಸ್ಥಾನ ನಾಶ ಮತ್ತು ಆಹಾರದ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ರಾಮಲಿಂಗಾರೆಡ್ಡಿ ವಿಶ್ಲೇಷಿಸಿದರು.
ಆನೆ ಓಡಿಸುವ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ:
ಈ ನಡುವೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಮುಂದಿನ ಸ್ಪಷ್ಟ ಆದೇಶ ಬರುವವರೆಗೂ ಕಾರ್ಯಾಚರಣೆ ನಡೆಸುವುದಿಲ್ಲ. ಸದ್ಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ 38 ಕಾಡಾನೆಗಳು ಬೀಡುಬಿಟ್ಟಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್ಒ ಬೋರಯ್ಯ ಮನವಿ ಮಾಡಿದ್ದಾರೆ.

