Mon. Nov 23rd, 2026

ಡಿ. 4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’: ಇಡೀ ನಗರವೇ ಸಾಂಸ್ಕೃತಿಕ ವೇದಿಕೆ

Share this with Friends

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಸಲುವಾಗಿ ಬರುವ ಡಿಸೆಂಬರ್ 4ರಿಂದ 13ರವರೆಗೆ ಹತ್ತು ದಿನಗಳ ಕಾಲ ‘ಬೆಂಗಳೂರು ಜಾತ್ರೆ’ (ಬೆಂಗಳೂರಿನ ಊರಹಬ್ಬ) ಆಯೋಜಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಪ್ರತಿಯೊಂದು ಊರಿಗೂ ತನ್ನದೇ ಆದ ವಿಶಿಷ್ಟ ಹಬ್ಬವಿರುತ್ತದೆ. ಅದೇ ರೀತಿ ದೇಶ-ವಿದೇಶಗಳ ಜನರನ್ನು ಒಳಗೊಂಡಿರುವ ನಮ್ಮ ಬೆಂಗಳೂರಿಗೂ ಒಂದು ಸಾಂಸ್ಕೃತಿಕ ಚಹರೆ ಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಇದು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ; ಜಿಬಿಎ (GBA), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್ ಇಲಾಖೆ, ನಮ್ಮ ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುವ ಜನರ ಹಬ್ಬವಾಗಿದೆ’’ ಎಂದು ವಿವರಿಸಿದರು.

ಮೆರವಣಿಗೆ ಮೂಲಕ ಅದ್ಧೂರಿ ಚಾಲನೆ: ಉತ್ಸವದ ಮೊದಲ ದಿನವಾದ ಡಿ. 4ರಂದು ಸಂಜೆ 4 ಗಂಟೆಗೆ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಭವ್ಯ ಮೆರವಣಿಗೆ ನಡೆಯಲಿದ್ದು, ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಬರುವ 20 ಕಲಾ ತಂಡಗಳ 500ಕ್ಕೂ ಹೆಚ್ಚು ಜಾನಪದ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ ಕಾಮರಾಜ ರಸ್ತೆಯ ವೇದಿಕೆಯಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

ಮೈದಾನ, ಪಾರ್ಕ್‌ಗಳಲ್ಲೂ ಸಾಂಸ್ಕೃತಿಕ ಸಂಭ್ರಮ: ಡಿ. 5 ಮತ್ತು 6ರಂದು ಫ್ರೀಡಂ ಪಾರ್ಕ್‌ನಲ್ಲಿ ಮಕ್ಕಳ ಮೇಳ, ಆಹಾರ ಮೇಳ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ ಎಲ್ಲಾ ಭಾಗದ ಜನರಿಗೆ ಅನುಕೂಲವಾಗುವಂತೆ ಪಶ್ಚಿಮದ ರಾಮಮಂದಿರ ಮೈದಾನ, ದಕ್ಷಿಣದ ಶಾಲಿನಿ ಗ್ರೌಂಡ್, ಪೂರ್ವದ ಐಟಿಐ ಮೈದಾನ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ಥಳೀಯ ವೇದಿಕೆಗಳನ್ನು ನಿರ್ಮಿಸಿ ಶಾಸ್ತ್ರೀಯ, ಜಾನಪದ ಹಾಗೂ ಆಧುನಿಕ ಕಲಾ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಮಾಲ್‌ಗಳು, ಪಾರ್ಕ್‌ಗಳು ಹಾಗೂ ಟೆಕ್ ಪಾರ್ಕ್‌ಗಳಲ್ಲೂ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ ಎಂದು ಹೇಳಿದರು.

ಬೆಂಗಳೂರು ಪುಸ್ತಕ ಮೇಳಕ್ಕೆ ಮರುಜೀವ: ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರತಿಷ್ಠಿತ ‘ಬೆಂಗಳೂರು ಪುಸ್ತಕ ಮೇಳ’ವನ್ನು ಈ ಜಾತ್ರೆಯ ಭಾಗವಾಗಿ ಪುನಾರಂಭಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಹಾಗೂ ಜಿಬಿಎ ಸಹಯೋಗದಲ್ಲಿ ಡಿ. 11, 12 ಮತ್ತು 13ರಂದು ಬೃಹತ್ ಪುಸ್ತಕ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಾರೋಪದಲ್ಲಿ ಸಂಗೀತ ರಸಸಂಜೆ: ಹತ್ತು ದಿನಗಳ ಈ ಸಾಂಸ್ಕೃತಿಕ ಹಬ್ಬಕ್ಕೆ ಭಾನುವಾರ, ಡಿ. 13ರಂದು ಎಂ.ಜಿ. ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ತೆರೆ ಬೀಳಲಿದೆ. ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಹಾಗೂ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಎಲ್ಲಾ ನಾಗರಿಕರು ಈ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದರು.

 

 bengaluru-jatre-2026-cultural-festival-minister-krishna-byre-gowda

 

ಬೆಂಗಳೂರು ಜಾತ್ರೆ, ಕೃಷ್ಣ ಬೈರೇಗೌಡ, ಬೆಂಗಳೂರು ಊರಹಬ್ಬ, ಬೆಂಗಳೂರು ಸುದ್ದಿ, ಪುಸ್ತಕ ಮೇಳ, Bengaluru Jatre, Krishna Byre Gowda, Bengaluru Oora Habba, Bengaluru News, Book Fair,

 


Share this with Friends

Related Post