Mon. Nov 23rd, 2026

ಹೊಸ ರೂಪ ಪಡೆದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ: ‘ವಾರ್ಡ್ ಒನ್’ ಅಭಿಯಾನದಡಿ ರಸ್ತೆಗೆ ಹೈಟೆಕ್ ಸ್ಪರ್ಶ!

Share this with Friends

ಬೆಂಗಳೂರು: ಗುಂಡಿಗಳು, ಕಳಪೆ ರಸ್ತೆ ಹಾಗೂ ಟ್ರಾಫಿಕ್ ಕಿರಿಕಿರಿಯಿಂದ ಸದಾ ಸುದ್ದಿಯಲ್ಲಿದ್ದ ರಾಜಧಾನಿಯ ಪ್ರಮುಖ ಮಾರ್ಗಗಳಲ್ಲಿ ಒಂದಾದ ಬನ್ನೇರುಘಟ್ಟ ಮುಖ್ಯರಸ್ತೆ ಈಗ ಸಂಪೂರ್ಣವಾಗಿ ಹೊಸ ರೂಪ ಪಡೆದುಕೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ (BSCC) ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಬಳಿಕ ಈ ರಸ್ತೆಯು ನಯವಾದ ಡಾಂಬರು ಹಾಗೂ ಸ್ಪಷ್ಟ ಪಥದ ಗುರುತುಗಳೊಂದಿಗೆ ಕಂಗೊಳಿಸುತ್ತಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ನಡೆದ ‘ವಾರ್ಡ್ ಒನ್’ (Ward One) ಅಭಿಯಾನದ ಭಾಗವಾಗಿ ಬನ್ನೇರುಘಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸಚಿವರು ಈ ಭಾಗದಲ್ಲಿ ತಡರಾತ್ರಿ ತಪಾಸಣೆ ನಡೆಸಿ, ಹದಗೆಟ್ಟ ರಸ್ತೆ, ಅಪೂರ್ಣ ಫುಟ್‌ಪಾತ್ ಹಾಗೂ ಕೆಟ್ಟುನಿಂತ ಬೀದಿದೀಪಗಳ ದುರಸ್ತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಬನ್ನೇರುಘಟ್ಟ ರಸ್ತೆಯಲ್ಲಿ ನಡೆದ ಪ್ರಮುಖ ಬದಲಾವಣೆಗಳು:

ಗುಣಮಟ್ಟದ ಡಾಂಬರೀಕರಣ. ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಕೋಳಿಫಾರ್ಮ್ ಗೇಟ್ ಹಾಗೂ ಪ್ರಮುಖ ಜಂಕ್ಷನ್‌ಗಳವರೆಗೆ ರಸ್ತೆಗೆ ಹೊಸದಾಗಿ ಗುಣಮಟ್ಟದ ಡಾಂಬರು ಹಾಕಲಾಗಿದ್ದು, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸ್ಪಷ್ಟ ಪಥ ಮತ್ತು ಜೀಬ್ರಾ ಕ್ರಾಸಿಂಗ್. ಸಂಚಾರ ಶಿಸ್ತು ಕಾಪಾಡಲು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ರಸ್ತೆಯುದ್ದಕ್ಕೂ ಸ್ಪಷ್ಟವಾದ ಲೇನ್ ಮಾರ್ಕಿಂಗ್ (ಪಥದ ಗುರುತು) ಮತ್ತು ಜೀಬ್ರಾ ಕ್ರಾಸಿಂಗ್ ಬಣ್ಣ ಬಳಿಯಲಾಗಿದೆ.

ಬೀದಿದೀಪ ಮತ್ತು ಫುಟ್‌ಪಾತ್ ಸುಧಾರಣೆ. ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟ ಗೋಚರತೆ ಸಿಗುವಂತೆ ಬೀದಿದೀಪಗಳನ್ನು ದುರಸ್ತಿಗೊಳಿಸಲಾಗಿದ್ದು, ಪಾದಚಾರಿ ಮಾರ್ಗಗಳನ್ನೂ (ಫುಟ್‌ಪಾತ್) ಸ್ವಚ್ಛಗೊಳಿಸಿ ಸುಗಮ ಓಡಾಟಕ್ಕೆ ಸಜ್ಜುಗೊಳಿಸಲಾಗಿದೆ.

ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನವೀಕರಣಗೊಂಡ ರಸ್ತೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಸುರಕ್ಷಿತ ಮತ್ತು ಸ್ಮಾರ್ಟ್ ಬೆಂಗಳೂರು ನಿರ್ಮಾಣದತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದೆ. ಇನ್ನು ಸಾರ್ವಜನಿಕರು ಕೂಡ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ, ಬನ್ನೇರುಘಟ್ಟ ರಸ್ತೆಯ ಒಳಭಾಗದ ರಸ್ತೆಗಳು ಹಾಗೂ ಇತರ ವಾರ್ಡ್‌ಗಳಲ್ಲೂ ಇದೇ ರೀತಿಯ ಗುಣಮಟ್ಟದ ಕಾಮಗಾರಿ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

 

 


Share this with Friends

Related Post