Mon. Nov 23rd, 2026

ಹಾಲು ಉತ್ಪಾದಕರಿಗೆ ಲೀಟರ್‌ಗೆ 7 ರೂ. ನೇರ ಹೆಚ್ಚಳ: ಡಿ. 13ರಂದು ಹಾಸನದಲ್ಲಿ ಬೃಹತ್ ಕೃತಜ್ಞತಾ ಸಮಾವೇಶ

Share this with Friends

ಬೆಂಗಳೂರು: ರಾಜ್ಯದ ಹೈನುಗಾರರ ಹಿತದೃಷ್ಟಿಯಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಿ, ಅದರಲ್ಲಿ 7 ರೂ. ನೇರವಾಗಿ ಹಾಲು ಉತ್ಪಾದಕ ರೈತರ ಕೈಸೇರುವಂತೆ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ರಾಜ್ಯದ 16 ಹಾಲು ಒಕ್ಕೂಟಗಳ ಅಧ್ಯಕ್ಷರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಹಾಲು ಒಕ್ಕೂಟಗಳು ಹೆಚ್ಚಿನ ಪಾಲು ಕೇಳಿದ್ದರೂ, ಒಕ್ಕೂಟಗಳಿಗೆ 1 ರೂ. ಉಳಿಸಿಕೊಂಡು ರೈತರಿಗೆ ನೇರವಾಗಿ 7 ರೂ. ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಈ ನಿರ್ಧಾರ ದೊಡ್ಡ ನೆಮ್ಮದಿ ತಂದಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸಲು ರಾಜ್ಯದ ಎಲ್ಲಾ 16 ಒಕ್ಕೂಟಗಳು ಒಟ್ಟಾಗಿ ಬರುವ ಡಿಸೆಂಬರ್ 13ರಂದು ಹಾಸನದಲ್ಲಿ ಬೃಹತ್ ಕೃತಜ್ಞತಾ ಸಮಾವೇಶ ಆಯೋಜಿಸಲು ತೀರ್ಮಾನಿಸಿವೆ’’ ಎಂದರು.

ದರ ಏರಿಕೆ ವಿರೋಧಿಸುವವರು ರೈತ ವಿರೋಧಿಗಳು: ಬರಗಾಲದ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಹಾಗೂ 15 ಮತ್ತು 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಕಡೆಗಣಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸಿ ರೈತರ ನೆರವಿಗೆ ನಿಂತಿದೆ. ಗ್ರಾಹಕರಿಂದಲೂ ಇದಕ್ಕೆ ಉತ್ತಮ ಸಹಕಾರವಿದೆ; ಆದರೆ ರಾಜಕೀಯ ವಿರೋಧಿಗಳು ಮಾತ್ರ ಇದನ್ನು ವಿರೋಧಿಸುತ್ತಿದ್ದು, ಅಂತಹವರು ರೈತ ವಿರೋಧಿಗಳಾಗಿದ್ದಾರೆ ಎಂದು ಸಚಿವರು ಕಿಡಿಕಾರಿದರು. ಸರ್ಕಾರದ ಈ ಕ್ರಮವನ್ನು ಅಭಿನಂದಿಸಲು ರಾಜ್ಯದ ಎರಡು ಕಡೆ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ಮೊದಲ ಸಮಾವೇಶ ಹಾಸನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಕ್ಷಾತೀತವಾಗಿ ನಡೆಯುವ ರೈತರ ಸಮಾವೇಶ: ಕೆ.ವೈ. ನಂಜೇಗೌಡ

ಇದೇ ವೇಳೆ ಮಾತನಾಡಿದ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ, ‘‘ಈ ಹಿಂದೆ ಬಿ.ಎಸ್. ಯಡಿಯೂರಪ್ಪ ₹2 ಹಾಗೂ ಸಿದ್ದರಾಮಯ್ಯ ₹3 ಸೇರಿ ಒಟ್ಟು ₹5 ಪ್ರೋತ್ಸಾಹಧನ ನೀಡಿದ್ದರು. ಆದರೆ ಲೀಟರ್‌ಗೆ ₹8 ದರ ಹೆಚ್ಚಿಸಿ, ₹7 ನೇರವಾಗಿ ರೈತರಿಗೆ ನೀಡುವಂತಹ ತೀರ್ಮಾನವನ್ನು ನನ್ನ 35 ವರ್ಷಗಳ ಸಹಕಾರಿ ಕ್ಷೇತ್ರದ ಅನುಭವದಲ್ಲೇ ಕಂಡಿರಲಿಲ್ಲ’’ ಎಂದು ಶ್ಲಾಘಿಸಿದರು.

ಹಾಸನ ಒಕ್ಕೂಟದ ಅಧ್ಯಕ್ಷ ರೇವಣ್ಣ ಸೇರಿದಂತೆ ಎಲ್ಲಾ 16 ಒಕ್ಕೂಟಗಳ ಅಧ್ಯಕ್ಷರು ಈ ಸಮಾವೇಶಕ್ಕೆ ಕೈಜೋಡಿಸಿದ್ದಾರೆ. ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಸಂಪೂರ್ಣವಾಗಿ ಪಕ್ಷಾತೀತವಾಗಿ ನಡೆಯುವ ಹಾಲು ಉತ್ಪಾದಕರ ಸಮಾವೇಶವಾಗಿದ್ದು, ಲಕ್ಷಾಂತರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

 


Share this with Friends

Related Post