Mon. Nov 23rd, 2026

ಕಾಡಾನೆ ಸ್ಥಳಾಂತರ ವಿರೋಧಿಸಿ ಶಾಸಕಿ ನಯನಾ ಮೋಟಮ್ಮ ಹೈಡ್ರಾಮಾ: ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರದೊಂದಿಗೆ ಹಾಜರ್, ಆದ್ರೆ ಸ್ವೀಕಾರವಾಗಲಿಲ್ಲ!

Share this with Friends

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಇಂದು (ನವೆಂಬರ್ 23) ವಿಧಾನಸೌಧದ ಸಭಾಧ್ಯಕ್ಷರ (ಸ್ಪೀಕರ್) ಕಚೇರಿಗೆ ಆಗಮಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.

ಸ್ಪೀಕರ್ ಗೈರು; ರಾಜೀನಾಮೆ ಪತ್ರ ಸ್ವೀಕರಿಸಲು ಕಾರ್ಯದರ್ಶಿ ನಿರಾಕರಣೆ:

ಭಾನುವಾರವಷ್ಟೇ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಎಚ್ಚರಿಕೆ ನೀಡಿದ್ದ ನಯನಾ ಮೋಟಮ್ಮ, ಅದರಂತೆ ಇಂದು ಸಿದ್ಧಪಡಿಸಿದ ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ಆಗಮಿಸಿದರು. ಆದರೆ, ಆ ಸಮಯದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಶಾಸಕಿಯು ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲು ಮುಂದಾದರು.

ಈ ವೇಳೆ, “ನಿಯಮಗಳ ಪ್ರಕಾರ ನಾನು ರಾಜೀನಾಮೆ ಪತ್ರ ಸ್ವೀಕರಿಸಲು ಅವಕಾಶವಿಲ್ಲ” ಎಂದು ಕಾರ್ಯದರ್ಶಿ ಸ್ಪಷ್ಟಪಡಿಸಿದರು. ಜೊತೆಗೆ, ಪತ್ರವು ನಿಗದಿತ ನಮೂನೆಯಲ್ಲಿಲ್ಲ ಎಂಬ ತಾಂತ್ರಿಕ ಕಾರಣವನ್ನೂ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಕಾರ್ಯದರ್ಶಿಗಳು ದೂರವಾಣಿ ಮೂಲಕ ಸ್ಪೀಕರ್ ಅವರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ.

ನಾಳೆ ಖುದ್ದು ಸ್ಪೀಕರ್ ಭೇಟಿಯಾಗಿ ಪತ್ರ ಸಲ್ಲಿಸುವೆ:

ಸ್ಪೀಕರ್ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ಸ್ವಪಕ್ಷೀಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಕಿಡಿಕಾರಿದರು. “ನನ್ನ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೂ ತಾರದೆ, ನಮ್ಮನ್ನು ಕೇಳದೆ ರಾತ್ರೋರಾತ್ರಿ ಏಕಪಕ್ಷೀಯವಾಗಿ ಆನೆ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಸನದ ಜನರ ಜೀವಕ್ಕೆ ಮಾತ್ರ ಬೆಲೆಯೇ? ಮೂಡಿಗೆರೆ ಜನರ ಪ್ರಾಣಕ್ಕೆ ಬೆಲೆ ಇಲ್ಲವೇ? ನನಗೆ ಅಧಿಕಾರಕ್ಕಿಂತ ಕ್ಷೇತ್ರದ ಮತದಾರರ ಜೀವ ಮತ್ತು ಕಾಫಿ ಬೆಳೆಗಾರರ ಹಿತ ಮುಖ್ಯ. ಇಂದು ಸ್ಪೀಕರ್ ಸಿಗದ ಕಾರಣ ನಾಳೆ ಖುದ್ದಾಗಿ ಅವರನ್ನೇ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ” ಎಂದು ಖಡಕ್ ಆಗಿ ಹೇಳಿದ್ದಾರೆ.

ಸರ್ಕಾರಕ್ಕೆ ತೀವ್ರ ಮುಜುಗರ:

ಬೇಲೂರಿನಲ್ಲಿ ಇತ್ತೀಚೆಗೆ ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳನ್ನು ಮೂಡಿಗೆರೆಯ ತತ್ಕೋಳ ಮೀಸಲು ಅರಣ್ಯದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಇದಕ್ಕೆ ಚಿಕ್ಕಮಗಳೂರಿನ ಶಾಸಕರಾದ ನಯನಾ ಮೋಟಮ್ಮ, ಟಿ.ಡಿ. ರಾಜೇಗೌಡ ಮತ್ತು ಹೆಚ್.ಡಿ. ತಮ್ಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸದ್ಯಕ್ಕೆ ಆನೆ ಓಡಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಸರ್ಕಾರದ ಮನವೊಲಿಕೆಗೆ ಶಾಸಕಿ ಮಣಿಯುತ್ತಾರಾ ಅಥವಾ ನಾಳೆ ರಾಜೀನಾಮೆ ನೀಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

 

 


Share this with Friends

Related Post