Tue. Nov 24th, 2026

ಬೆಂಗಳೂರು ‘ಬ್ಲೂ ಲೈನ್’ ಮೆಟ್ರೋ ಕಾಮಗಾರಿಗೆ ವೇಗ: ಕೆ.ಆರ್. ಪುರದಿಂದ ದೊಡ್ಡೆನಕುಂಡಿವರೆಗೆ ಪ್ರಾಯೋಗಿಕ ಸಂಚಾರ ಆರಂಭ

Share this with Friends

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ‘ಬ್ಲೂ ಲೈನ್’ (ನೀಲಿ ಮಾರ್ಗ) ನಮ್ಮ ಮೆಟ್ರೋ ಕಾಮಗಾರಿಯು ನಿರ್ಣಾಯಕ ಮೈಲಿಗಲ್ಲು ತಲುಪಿದೆ. ಕೆ.ಆರ್. ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಮಾರ್ಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಆರಂಭವಾಗಿದ್ದು, ಸದ್ಯ ಕೆ.ಆರ್. ಪುರದಿಂದ ದೊಡ್ಡೆನಕುಂಡಿವರೆಗೆ ಮೆಟ್ರೋ ರೈಲು ಸಂಚರಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಮೆಟ್ರೋ ಸಂಚಾರದ ಮೊದಲ ನೋಟದ ದೃಶ್ಯಗಳನ್ನು ಅನಾವರಣಗೊಳಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ಸವಾಲುಗಳಿಗೆ ಸಮಗ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಮಾರ್ಗವು ಪ್ರಮುಖ ಸೇರ್ಪಡೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಹಂತದ ಪ್ರಕ್ರಿಯೆಗಳೇನು?

ಪ್ರಸ್ತುತ ನಡೆಯುತ್ತಿರುವ ಪ್ರಾಯೋಗಿಕ ಸಂಚಾರದ ಬೆನ್ನಲ್ಲೇ, ಇನ್ನೆರಡು ತಿಂಗಳಲ್ಲಿ ಈ ಮಾರ್ಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ (Automated Signalling) ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳಲಿದೆ. ಆ ಬಳಿಕ ನಿಯಮಾನುಸಾರ ಸುರಕ್ಷತಾ ಪ್ರಮಾಣೀಕರಣ (Safety Certification) ಪ್ರಕ್ರಿಯೆ ನಡೆಯಲಿದೆ. ಕಾಮಗಾರಿಯ ಪ್ರತಿಯೊಂದು ಹಂತದಲ್ಲೂ ವೇಗ ಕಾಯ್ದುಕೊಳ್ಳಲಾಗಿದ್ದು, ಆದಷ್ಟು ಶೀಘ್ರವಾಗಿ ಈ ಮಾರ್ಗವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 

 


Share this with Friends

Related Post