ಒಸಾಕಾ / ಬೆಂಗಳೂರು: ರಾಜ್ಯದ ನಗರ ಪ್ರದೇಶಗಳ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ತ್ಯಾಜ್ಯದಿಂದ ಇಂಧನ (Waste-to-Energy) ಉತ್ಪಾದಿಸುವ ಆಧುನಿಕ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ನಿಯೋಗದೊಂದಿಗೆ ಜಪಾನ್‌ನ ಒಸಾಕಾದಲ್ಲಿರುವ ‘ಮೈಶಿಮಾ ತ್ಯಾಜ್ಯ ದಹನ ಘಟಕ’ಕ್ಕೆ (Maishima Incineration Plant) ಭೇಟಿ ನೀಡಿ ಪರಿಶೀಲಿಸಿದರು.
ದಿನಕ್ಕೆ 900 ಟನ್ ತ್ಯಾಜ್ಯ ಸಂಸ್ಕರಣೆ, 32 ಮೆ.ವ್ಯಾ. ವಿದ್ಯುತ್ ಉತ್ಪಾದನೆ:
ಒಸಾಕಾದ ಮೈಶಿಮಾ ದ್ವೀಪದಲ್ಲಿರುವ ಈ ಘಟಕವು 2001ರಿಂದ ಕಾರ್ಯನಿರ್ವಹಿಸುತ್ತಿದ್ದು, ಎರಡು ಬೃಹತ್ ದಹನ ಯಂತ್ರಗಳ ಮೂಲಕ ಪ್ರತಿದಿನ ಬರೋಬ್ಬರಿ 900 ಟನ್ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುತ್ತಿದೆ. 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕವು, ತನ್ನದೇ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಸಾರ್ವಜನಿಕ ವಿದ್ಯುತ್ ಜಾಲಕ್ಕೆ (ಗ್ರಿಡ್) ಪೂರೈಸುತ್ತಿದೆ.
ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ವಿಶಿಷ್ಟ ವಿನ್ಯಾಸ:
ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಅತ್ಯಾಧುನಿಕ ದಹನ ನಿಯಂತ್ರಣ ವ್ಯವಸ್ಥೆ, ನಿರಂತರ ಹೊಗೆ (ಹೊರಸೂಸುವಿಕೆ) ಮೇಲ್ವಿಚಾರಣೆ ಹಾಗೂ ಸುಧಾರಿತ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸಲಾಗಿದೆ. ತಂತ್ರಜ್ಞಾನದ ಜೊತೆಗೆ ಈ ಘಟಕವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದಲೂ ಗಮನ ಸೆಳೆಯುತ್ತದೆ. ಖ್ಯಾತ ಆಸ್ಟ್ರಿಯನ್ ಕಲಾವಿದ ಫ್ರೈಡೆನ್‌ಸ್ರೀಚ್ ಹಂಡರ್ಟ್‌ವಾಸ್ಸರ್ ವಿನ್ಯಾಸಗೊಳಿಸಿರುವ ಈ ಕಟ್ಟಡವು ವರ್ಣರಂಜಿತ ಗೋಡೆಗಳು, ವಿಶಿಷ್ಟ ಆಕೃತಿಗಳು ಮತ್ತು ಸುತ್ತಲೂ ಹಸಿರಿನಿಂದ ಕೂಡಿದ್ದು, ಕಲೆ ಮತ್ತು ಪರಿಸರ ಜಾಗೃತಿಯ ತಾಣವಾಗಿಯೂ ಗುರುತಿಸಿಕೊಂಡಿದೆ.
ರಾಜ್ಯದ ನಗರಗಳ ಅಭಿವೃದ್ಧಿಗೆ ಪೂರಕ:
ಅಂತಾರಾಷ್ಟ್ರೀಯ ಮಟ್ಟದ ನಗರ ಯೋಜನೆ, ಮೂಲಸೌಕರ್ಯ ಹಾಗೂ ಪರಿಸರ ನಿರ್ವಹಣಾ ಮಾದರಿಗಳನ್ನು ಅಳವಡಿಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ. ಇಂತಹ ಸುಧಾರಿತ ಘಟಕಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಮೂಲಕ ರಾಜ್ಯದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಹಾಗೂ ಸ್ವಚ್ಛ, ಸುಸ್ಥಿರ ನಗರಗಳನ್ನು ನಿರ್ಮಿಸಲು ಸರ್ಕಾರ ಗುರಿ ಹೊಂದಿದೆ.

