Tue. Nov 24th, 2026

ವಿಶ್ವ ರೋಬೋಟ್ ಒಲಿಂಪಿಯಾಡ್‌ನಲ್ಲಿ ಬೆಂಗಳೂರು ವಿದ್ಯಾರ್ಥಿಗಳ ಅಮೋಘ ಸಾಧನೆ:ಮಧು ಬಂಗಾರಪ್ಪ ಅಭಿನಂದನೆ

Share this with Friends

ಬೆಂಗಳೂರು: ಕ್ರೊಯೇಷಿಯಾದ ಝಾಗ್ರೆಬ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ‘ವಿಶ್ವ ರೋಬೋಟ್ ಒಲಿಂಪಿಯಾಡ್ (WRO) ಯುರೋಪ್ ಓಪನ್–2026’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ ಬೆಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಯೂಖ್ ನಾಗರಾಜು ಮತ್ತು ರೇಯಾಂಶ್ ಧಾಗ್ಲೆ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಆತ್ಮೀಯವಾಗಿ ಅಭಿನಂದಿಸಿದರು.

ಮಂಗಳವಾರ ತಮ್ಮ ಗೃಹ ಕಚೇರಿಗೆ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿ ಶುಭ ಹಾರೈಸಿದರು. ಈ ವೇಳೆ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ತಾವು ಪ್ರಸ್ತುತಪಡಿಸಿದ ವಿಶಿಷ್ಟ ರೋಬೋಟಿಕ್ಸ್ ಮಾದರಿ ಹಾಗೂ ಅದರ ಕಾರ್ಯವೈಖರಿಯ ಕುರಿತು ಸಚಿವರಿಗೆ ವಿವರಿಸಿದರು. ಮಕ್ಕಳ ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಮತ್ತು ಪರಿಶ್ರಮವನ್ನು ಕಂಡು ಸಚಿವರು ಹರ್ಷ ವ್ಯಕ್ತಪಡಿಸಿದರು.

ಭಾರತಕ್ಕೆ ಏಕೈಕ ಪದಕ ತಂದ ತಂಡ:

‘ಟೆಕ್‌ಟೈಲ್ ಟ್ವಿನ್ಸ್’ (TechTile Twins) ಹೆಸರಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ಜೋಡಿಯು, 45 ರಾಷ್ಟ್ರಗಳ 225 ತಂಡಗಳು ಪಾಲ್ಗೊಂಡಿದ್ದ ‘ಫ್ಯೂಚರ್ ಇನೋವೇಟರ್ಸ್’ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ, ಝಾಗ್ರೆಬ್ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಭಾರತದಿಂದ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು. ಆ ಪೈಕಿ ಅಗ್ರ ಮೂರು ಸ್ಥಾನಗಳೊಳಗೆ ಸ್ಥಾನ ಪಡೆದ ಭಾರತದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಪರಂಪರೆ ಮತ್ತು ತಂತ್ರಜ್ಞಾನದ ಸಂಗಮ:

ಈ ಬಾರಿಯ ಸ್ಪರ್ಧೆಯ ಧ್ಯೇಯವಾಕ್ಯವಾದ ‘ರೋಬೋಟ್ಸ್ ಮೀಟ್ ಕಲ್ಚರ್’ (Robots Meet Culture) ಅಡಿಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ‘ಎಕೋಸ್ ಆಫ್ ಹೆರಿಟೇಜ್ – ಫ್ರಮ್ ಏನ್ಷಿಯಂಟ್ ಹ್ಯಾಂಡ್ಸ್ ಟು ಫ್ಯೂಚರ್ ಮೈಂಡ್ಸ್’ ಎಂಬ ವಿನೂತನ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅವರು ರಾಜ್ಯದ ಐತಿಹಾಸಿಕ ಹೊಯ್ಸಳ ದೇವಾಲಯಗಳಿಗೆ ಖುದ್ದು ಭೇಟಿ ನೀಡಿ, ಪುರಾತತ್ವ ಸಂರಕ್ಷಣಾ ತಜ್ಞರು ಹಾಗೂ ಸ್ಥಳೀಯ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದ್ದರು. ದೇವಾಲಯದ ಸೂಕ್ಷ್ಮ ಶಿಲ್ಪಕಲೆಗಳ ಚಿತ್ರಗಳನ್ನು ಸೆರೆಹಿಡಿದು 3D ದಾಖಲೀಕರಣ ಮಾಡುವ ರೋಬೋಟ್ ಹಾಗೂ ಬಟ್ಟೆಯ ಮೇಲೆ ಸಾಂಪ್ರದಾಯಿಕ ಅಚ್ಚು ಮುದ್ರಿಸುವ (ಬ್ಲಾಕ್ ಪ್ರಿಂಟಿಂಗ್) ಹಂತಗಳನ್ನು ನಿರ್ವಹಿಸುವ ಮತ್ತೊಂದು ರೋಬೋಟ್ ಮಾದರಿಯನ್ನು ಇವರು ಅಭಿವೃದ್ಧಿಪಡಿಸಿದ್ದರು.

ಹಂತ ಹಂತವಾಗಿ ಯಶಸ್ಸಿನ ಪಯಣ:

ಬೆಂಗಳೂರಿನಲ್ಲಿ ನಡೆದ ಪ್ರಾದೇಶಿಕ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಈ ತಂಡ, ಬಳಿಕ ಹೈದರಾಬಾದ್‌ನಲ್ಲಿ ಜರುಗಿದ ರಾಷ್ಟ್ರೀಯ ಸುತ್ತಿನಲ್ಲಿ ‘ಗೋಲ್ಡ್ ಬ್ಯಾಡ್ಜ್’ ಮುಡಿಗೇರಿಸಿಕೊಂಡು ಯುರೋಪ್ ಓಪನ್ ಸ್ಪರ್ಧೆಗೆ ಅರ್ಹತೆ ಪಡೆದಿತ್ತು.

ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಸಚಿವ ಮಧು ಬಂಗಾರಪ್ಪ, ನಾಡಿನ ಐತಿಹಾಸಿಕ ಪರಂಪರೆ, ಸಾಂಪ್ರದಾಯಿಕ ಕಲೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬೆಸೆದು ವಿದ್ಯಾರ್ಥಿಗಳು ರೂಪಿಸಿರುವ ಈ ಮಾದರಿ ಅತ್ಯಂತ ಮಾದರಿಯಾಗಿದೆ. ಮಕ್ಕಳಲ್ಲಿರುವ ಇಂತಹ ಸಂಶೋಧನಾ ಮನೋಭಾವ ಮತ್ತು ನಾವೀನ್ಯತೆಯ ಚಿಂತನೆಗಳಿಗೆ ಸಮಾಜ ಹಾಗೂ ಸರ್ಕಾರದಿಂದ ಸದಾ ಪ್ರೋತ್ಸಾಹ ದೊರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

 


Share this with Friends

Related Post