Tue. Nov 24th, 2026

ಎಫ್‌ಡಿಎ, ಎಸ್‌ಡಿಎ ನೇಮಕಾತಿ: ಅರ್ಜಿ ಸಲ್ಲಿಕೆ ಅವಧಿ ನ.30ರವರೆಗೆ ವಿಸ್ತರಣೆ

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು (FDA) ಹಾಗೂ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ನವೆಂಬರ್ 26ರೊಳಗೆ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿತ್ತು. ಆದರೆ, ಉದ್ಯೋಗಾಕಾಂಕ್ಷಿಗಳು ಹಾಗೂ ಅಭ್ಯರ್ಥಿಗಳ ನಿರಂತರ ಮನವಿಯನ್ನು ಪರಿಗಣಿಸಿ, ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ಮುಂದೂಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ವಿಸ್ತೃತ ಅವಧಿಯೊಳಗೆ ಅರ್ಜಿ ಭರ್ತಿ ಮಾಡಿ ಶುಲ್ಕ ಪಾವತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅಲ್ಲದೆ, ನೇಮಕಾತಿ ಪ್ರಕ್ರಿಯೆಯ ಇತರ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಈ ಹಿಂದೆ ನಿಗದಿಪಡಿಸಿದ ದಿನಾಂಕದಂದೇ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಪಿಜಿ ವೈದ್ಯಕೀಯ: ಸೀಟು ರದ್ದುಪಡಿಸಿಕೊಳ್ಳಲು ನ.25ರವರೆಗೆ ಅವಕಾಶ

ಸ್ನಾತಕೋತ್ತರ (PG) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳ ಪೈಕಿ, ಸೀಟನ್ನು ರದ್ದುಪಡಿಸಿಕೊಳ್ಳಲು ಇಚ್ಛಿಸುವವರಿಗೆ ‘ಚಾಯ್ಸ್-4’ (Choice-4) ಆಯ್ಕೆ ದಾಖಲಿಸಿ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಹೋಗಲು ನವೆಂಬರ್ 25ರ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಮೂಲಕ ಸೀಟು ಪಡೆದಿರುವ ಹಲವು ಅಭ್ಯರ್ಥಿಗಳಿಗೆ ಕೆಇಎ ಮೂಲಕವೂ ಸೀಟು ಹಂಚಿಕೆಯಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ದಂಡವಿಲ್ಲದೆ ಉಚಿತವಾಗಿ ಸೀಟು ಬಿಟ್ಟುಕೊಡಲು ಈ ‘ಚಾಯ್ಸ್-4’ ಅವಕಾಶ ನೀಡಲಾಗಿದೆ. ಹೀಗೆ ಅಭ್ಯರ್ಥಿಗಳು ರದ್ದುಪಡಿಸಿಕೊಂಡ ಸೀಟುಗಳನ್ನು ಎರಡನೇ ಸುತ್ತಿನ ಕೌನ್ಸೆಲಿಂಗ್‌ಗೇ ಸೇರ್ಪಡೆಗೊಳಿಸಿ, ಅರ್ಹರಿಗೆ ಪುನಃ ಸೀಟು ಹಂಚಿಕೆ ಮಾಡಲು ಪ್ರಾಧಿಕಾರ ನಿರ್ಧರಿಸಿದೆ ಎಂದು ಅವರು ವಿವರಿಸಿದ್ದಾರೆ.

 


Share this with Friends

Related Post