ಬೆಂಗಳೂರು: ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಪಿಕ್ಸೆಲ್’ (Pixxel) ರಾಜ್ಯದಲ್ಲಿ 2.5 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್ ಉಪಗ್ರಹ ತಯಾರಿಕಾ ಘಟಕವನ್ನು ಸ್ಥಾಪಿಸಲು ಮುಂದಾಗಿರುವುದು ಕರ್ನಾಟಕದ ಬಾಹ್ಯಾಕಾಶ ತಂತ್ರಜ್ಞಾನ (SpaceTech) ಪರಿಸರ ವ್ಯವಸ್ಥೆಗೆ ದೊಡ್ಡ ಶಕ್ತಿ ತುಂಬಲಿದೆ ಎಂದು ಗೃಹಸಚಿವರೂ ಆದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ತಾಣವಾಗಿ ಕರ್ನಾಟಕ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಪ್ರಮುಖ ಕೇಂದ್ರಗಳು, ಮುಂಚೂಣಿಯ ಖಾಸಗಿ ಬಾಹ್ಯಾಕಾಶ ಕಂಪನಿಗಳು ಹಾಗೂ ಈ ವಲಯಕ್ಕೆ ಅಗತ್ಯವಿರುವ ಸಮಗ್ರ ಪೂರೈಕೆ ಸರಪಳಿಯನ್ನು ರಾಜ್ಯ ಹೊಂದಿದೆ. ಈ ಸದೃಢ ತಾಂತ್ರಿಕ ಪರಿಸರವು ಸಂಶೋಧನೆ, ಉತ್ಪಾದನೆ ಮತ್ತು ನಾವೀನ್ಯತೆಗೆ ಅತ್ಯಂತ ಪೂರಕವಾಗಿದೆ ಎಂದು ವಿವರಿಸಿದ್ದಾರೆ.
ಸ್ಪೇಸ್ಟೆಕ್ ನೀತಿಯಡಿ ಮೂಲಸೌಕರ್ಯಕ್ಕೆ ಒತ್ತು:
ರಾಜ್ಯದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸರ್ಕಾರವು ‘ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ ಅನ್ನು ಜಾರಿಗೆ ತಂದಿದೆ. ಈ ನೀತಿಯ ಮೂಲಕ ರಾಜ್ಯದಲ್ಲಿ ಪ್ರತ್ಯೇಕ ಬಾಹ್ಯಾಕಾಶ ಉತ್ಪಾದನಾ ಕ್ಲಸ್ಟರ್ಗಳು ಹಾಗೂ ಸಾಮಾನ್ಯ ಪರೀಕ್ಷಾ ಸೌಲಭ್ಯಗಳನ್ನು (Common Testing Facilities) ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಉತ್ಪಾದನೆ ಮತ್ತು ಪರೀಕ್ಷಾ ಮೂಲಸೌಕರ್ಯವನ್ನು ಬಲಪಡಿಸುವುದರಿಂದ ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ವಿಪುಲ ಅವಕಾಶಗಳು ತೆರೆದುಕೊಳ್ಳಲಿವೆ. ಇದು ಖಾಸಗಿ ವಲಯದ ಹೂಡಿಕೆ ಮತ್ತು ಉದ್ಯಮಶೀಲತೆಯ ಬೆಳವಣಿಗೆಗೂ ವೇಗ ನೀಡಲಿದೆ. ಪಿಕ್ಸೆಲ್ ಸಂಸ್ಥೆಯಂತಹ ಬೃಹತ್ ಉಪಗ್ರಹ ತಯಾರಿಕಾ ಘಟಕದ ಸ್ಥಾಪನೆಯು ರಾಜ್ಯದ ಸ್ಪೇಸ್ಟೆಕ್ ಕ್ಷೇತ್ರದ ಪ್ರಗತಿಗೆ ಸಾಕ್ಷಿಯಾಗಿದ್ದು, ಸಂಶೋಧನೆ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

