Wed. Nov 25th, 2026

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಚರ್ಚೆ ಮತ್ತೆ ಮುನ್ನೆಲೆಗೆ: ಇಂದಲ್ಲ ನಾಳೆ ಪ್ರತ್ಯೇಕ ರಾಜ್ಯ ಆಗೇ ಆಗುತ್ತೆ ಎಂದ ಬಾಲಚಂದ್ರ ಜಾರಕಿಹೊಳಿ; 

Share this with Friends

ಬೆಳಗಾವಿ/ಕೋಲಾರ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಹಾಗೂ ವಾಕ್ಸಮರಕ್ಕೆ ನಾಂದಿ ಹಾಡಿದೆ. ಉತ್ತರ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಇಂದಲ್ಲ ನಾಳೆ ಅಥವಾ ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗೇ ಆಗುತ್ತದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ದಿವಂಗತ ಮಾಜಿ ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಪ್ರತ್ಯೇಕ ರಾಜ್ಯ ರಚನೆಯಾಗಿ ಬೆಳಗಾವಿ ರಾಜಧಾನಿಯಾದರೆ ಮಾತ್ರ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಿದ್ದರು. ಈಗಿನ ಪರಿಸ್ಥಿತಿಗಳನ್ನು ಗಮನಿಸಿದರೆ ಅವರ ಮಾತು ಸತ್ಯ ಎನಿಸುತ್ತಿದೆ ಮತ್ತು ಪ್ರತ್ಯೇಕ ರಾಜ್ಯವಾದರೆ ಒಳ್ಳೆಯದು ಎಂದು ನಮಗೂ ಅನ್ನಿಸುತ್ತಿದೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು.

ಅಧಿವೇಶನದಲ್ಲೂ ಹೋರಾಟದ ಎಚ್ಚರಿಕೆ:

“ಕೇವಲ 10 ದಿನಗಳ ಅಧಿವೇಶನ ನಡೆಸಲು ಜನಪ್ರತಿನಿಧಿಗಳು ಇಲ್ಲಿಗೆ ಬಂದು ಹೋಗುವುದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಕನಿಷ್ಠ ಐದು ದಿನಗಳ ಕಾಲವನ್ನಾದರೂ ಉತ್ತರ ಕರ್ನಾಟಕದ ನೀರಾವರಿ, ಬರ ಹಾಗೂ ರೈತರ ಸಂಕಷ್ಟಗಳ ಚರ್ಚೆಗೆ ಮೀಸಲಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಬೆಳಗಾವಿ ಜಿಲ್ಲೆಯ ನಾಯಕರು ಹಾಗೂ ಪಕ್ಷದೊಳಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ರೈತರಿಗೆ ಪರಿಹಾರ ಕೊಡಿಸಲು ಸದನದ ಒಳಗೆ ಮತ್ತು ಹೊರಗೆ ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದೇವೆ” ಎಂದು ಅವರು ತಿಳಿಸಿದರು.

ಸಚಿವ ಎಚ್.ಸಿ. ಬಾಲಕೃಷ್ಣ ತೀವ್ರ ತಿರುಗೇಟು:

ಬಾಲಚಂದ್ರ ಜಾರಕಿಹೊಳಿ ಅವರ ಈ ಹೇಳಿಕೆಗೆ ಕೋಲಾರದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿರುವ ಸಚಿವ ಎಚ್.ಸಿ. ಬಾಲಕೃಷ್ಣ, “ಅಖಂಡ ಕರ್ನಾಟಕವನ್ನು ವಿಭಜಿಸುವ ಕುರಿತು ಇವರು ತಮ್ಮ ತೆವಲಿಗೆ ಮಾತನಾಡುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಏಕೆ ಅಭಿವೃದ್ಧಿಪಡಿಸಲಿಲ್ಲ? ಆಗ ಅಭಿವೃದ್ಧಿ ಮಾಡಿದ್ದರೆ ಈಗ ಅಭಿವೃದ್ಧಿಯ ಪ್ರಶ್ನೆಯೇ ಬರುತ್ತಿರಲಿಲ್ಲ. ಇಂತಹ ಮಾತುಗಳಿಗೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.

 


Share this with Friends

Related Post